Wednesday, March 9, 2011

ಎಂಥಾ ದಿನಗಳವು..

ಅಮ್ಮ ನಂಗೆ ಯಾವಾಗಲೂ ಬೈತಾ ಇರ್ತಾಳೆ.. ನಿನ್ ಗೆಳೆಯರ ಮುಂದೆ ಗಂಭೀರವಾಗಿರು. ಹರಟೆ ಕೊಚ್ಚಬೇಡ ಅಂತೆಲ್ಲ..ಆದ್ರೆ ಗೆಳೆಯರ ಮುಂದೆ ಅಲ್ದೆ ನಾವು ಯಾರ ಮುಂದೆ ನಮ್ಮ ದಡ್ಡತನ, ಹುಂಬತನ, ಅಸೂಯೆ, ಆಸೆ - ಇವೆಲ್ಲವನ್ನೂ ಪ್ರದರ್ಶಿಸೋಕೆ ಸಾಧ್ಯ? ಇದನ್ನ 'ಜನರೇಶನ್ ಗ್ಯಾಪ್' ಅನ್ನಬೇಕೋ ಏನೋ ನಂಗೆ ತಿಳಿಯೋದಿಲ್ಲ. ಆದ್ರೆ ಬದ್ಧ ಅಂದ್ರೆ, ನಮ್ಮ ಕುಟುಂಬದವರ ಹೊರತಾಗಿ ಯಾರ ಮುಂದೆಯಾದ್ರೂ ನಾವು ನಾವಾಗಿದ್ರೆ, ಅವ್ರು ನಮ್ಮ 'ಗೆಳೆಯರು' ಮಾತ್ರ. ಯಾರೋ ಅಪರಿಚಿತರ ಬಳಿ ನಮ್ಮ ದುಃಖ ಸಂಕಟ, ನೋವು ನಲಿವುಗಳು, ಪರಮಾಪ್ತ ಸಂಗತಿಗಳನ್ನ ಹಂಚಿಕೊಳ್ಳೋಕೆ ಸಾಧ್ಯವೇ?

ಗೆಳೆಯರೊಂದಿಗೆ ಕಳೆದ ದಿನಗಳ ನೆನಪುಗಳು ಸದಾ ಹಸಿರು.. ಎಲೆ ಉದುರುತ್ತದೆ ಮತ್ತೆ ಚಿಗುರುತ್ತದೆ. ನಮ್ಮ ಜೀವನಕ್ಕೆ ಹೊಸತನ್ನು ತಂದು ಕೊಡುವುದೇ ಗೆಳೆತನ.. ಹೊಸತನ್ನು ತರುತ್ತದೋ ಇಲ್ಲವೋ, ಆದರೆ ನಮ್ಮ ಮನಃಪಟಲಕ್ಕೆ ಅಂಟಿದ ದುಃಖ ದೂರ ಮಾಡುವ ಮಾಯಾಶಕ್ತಿ ಗೆಳೆತನಕ್ಕಿದೆ..

ನನ್ನ ಅಭಿಯಂತರ ಪದವಿಯ ೪ ವರ್ಷಗಳಲ್ಲಿ ಜೀವನದುದ್ದಕ್ಕೂ ಸವಿಯಬಹುದಾದಷ್ಟು  ಗೆಳೆತನದ ಸವಿ ನನಗೆ ಸಿಕ್ತು! ಆಡದ ತರಲೆ ಆಟಗಳಿಲ್ಲ, ಇಂಥದ್ದರ ಬಗ್ಗೆ ಮಾತಾಡಿಲ್ಲ ಅನ್ನೋ ಹಂಗಿಲ್ಲ. ಆಗಸದ ಕೆಳಗೆ ಸಿಗೋ ಎಲ್ಲ ವಿಷಯಗಳ ಬಗ್ಗೆಯೂ ನಿರ್ಲಿಪ್ತ ವಾಗ್ಝರಿ ಹರಿಯುತ್ತಲಿರುತ್ತಿತ್ತು!! ಇಂಥಾ ಅಭಿಯಂತರ ಪದವಿಯ ೪ ವರ್ಷಗಳು ಘಕ್ಕನೆ ನಿನ್ನೆ ರಾತ್ರಿಯಿಂದ ಬಹಳವಾಗಿ ಕಾಡತೊಡಗಿತು..ನಿಮ್ಮೊಂದಿಗೆ ಅದನ್ನೊಂದಿಷ್ಟು ಹಂಚಿಕೊಳ್ಳೋಣ ಅಂತ ಈ ಪೋಸ್ಟು..

ನಮ್ಮ ಮೇಷ್ಟ್ರೊಬ್ಬರು ನನ್ನನ್ನು ಒಬ್ಬ ಹುಡುಗಿಯೊಡನೆ ಓಡಿಸಿದ್ದು..
ನಾನು ದಿನಾ ಬಿಸ್ಕತ್ತು ಹಾಕುತ್ತಿದ್ದ ನಾಯಿ ನನ್ನನ್ನು ಹಿಂಬಾಲಿಸಿ ತರಗತಿಯೊಳಗೆ ಬಂದಿದ್ದು..
ಪ್ರಾಜೆಕ್ಟ್ ಕೆಲಸದ ನಡುವೆ ಡಿಪಾರ್ಟಮೆಂಟ್ ಒಳಗೆ ಕೇರಂ ಆಡುತ್ತ ಕೂಗಿದ್ದು..
ಸರ್ವೇ ಮಾಡುವಾಗ ಗೆಳೆಯನೊಬ್ಬ "ಲಾಂಗ್ ಜಂಪ್" ಮಾಡಲು ಹೋಗಿ ಸುಮಾರು ೮ ಅಡಿ ಮೇಲಿಂದ ಧಡಾರ್ ಎಂದು ಬಿದ್ದಿದ್ದು..
ಸರ್ವೇ ಮಾಡದೇ ರಿಪೋರ್ಟು ತುಂಬಿದ್ದು..
ರಸಪ್ರಶ್ನೆಗೆ ಪ್ರಶ್ನೆ ಹುಡುಕುತ್ತ ಹರಟುತ್ತ ಕಾಲ ಕಳೆದಿದ್ದು..
ಒಬ್ಬ ಲೇಡಿ ಟೀಚರು ನನ್ನನ್ನು 'ಕಾರು' ಎಂದು ಸಂಬೋಧಿಸಿದ್ದು..
ಪ್ರತಿ ಸಂಜೆ 'ಯಂಪಾ' ಛೋಟಾ ಟೀ ಹೀರಿದ್ದು..
ವಾರಕ್ಕೆ ಒಮ್ಮೆಯಾದರೂ ಚಿಕನ್ ಬಿರಿಯಾನಿ ತಿಂದಿದ್ದು..
ಕಾಲೇಜಿನ ಗಣಪತಿ ದೇಗುಲಕ್ಕೆ ರೌಂಡು ಹೊಡೆದಿದ್ದು..
ಬೈಕ್ ಓಡಿಸುವುದ ಕಲಿತದ್ದು..
ಹುಡುಗೀರ ಹಾಸ್ಟೆಲ್ಲಿಗೆ ಅಮೋಘ ೪ ಬಾರಿ ಧೈರ್ಯವಾಗಿ ಮೇನ್ ಗೇಟ್ ಮೂಲಕ ಪ್ರವೇಶಿಸಿದ್ದು..
ಬ್ರಾಂಚ್ ಫೆಸ್ಟ್ ಆದ ಸಂದರ್ಭದಲ್ಲಿ ಸೀರೆ ಉಟ್ಟು ಬಂದಿದ್ದ ಗೆಳತಿಯರ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದು..
ಪ್ರೊಫೆಸರುಗಳೊಡನೆ  ಹುಚ್ಚರಂತೆ ಕುಣಿದಿದ್ದು..
ಕಾಲೇಜಿನ ವಾರ್ಷಿಕ ಸಂಚಿಕೆಗೆ ಹೊತ್ತಲ್ಲದ ಹೊತ್ತಲ್ಲೂ ಕೆಲಸ ಮಾಡಿದ್ದು..
ಮುದ್ದಿನ ನಾಯಿ 'ಬಬಲ್ಸ್' ಸತ್ತಾಗ ಬೇಸರವಾಗಿದ್ದು..
'ನಿನ್ ಹೆಂಡ್ತೀನ ನೆನ್ಸ್ಕೊಂಡ್ರೆ ನಂಗೆ ಭಾಳ ದುಃಖ ಆಗುತ್ತೆ ರಘು' ಅಂತ ಒಬ್ಬ ಪ್ರೊಫೆಸರು ಇನ್ನೊಬ್ರಿಗೆ ಚುಡಾಯ್ಸಿದ್ದು..
'ಸಾರ್ ಇವ್ನು ಎಫ್ ಟಿವಿ ನೋಡ್ತಾನೆ ಸಾರ್' ಅಂತ ಅದೇ ಪ್ರೊಫೆಸರು ನಮ್ಮ ತರಗತಿಯ ಮುಖಂಡನಿಗೆ ಎಲ್ಲರ ಮುಂದೆ 
ಕಿರುಚಿದ್ದು..
ಪ್ರತೀ ಸಮಾರಂಭದಲ್ಲೂ ಉಪ್ಪಿಟ್ಟು ಕೇಸರಿಬಾತು ತಿಂದಿದ್ದು..
ಜಿಯಾಲಜಿ ಲ್ಯಾಬ್ ನಲ್ಲಿ ಮಾತು ಮಾತಿಗೂ 'ಮುಂಡೇವ' ಅಂತ ಬೈಸ್ಕೊಂಡಿದ್ದು..
"ಚಿತ್ರದುರ್ಗ ಈಸ್ ಕಾಲ್ಡ್ ಎ ಸ್ಟೋನ್ ಡಿಸ್ಟ್ರಿಕ್ಟ್" ಅನ್ನೋ ಮಾತಿಗೆ ಸೂರು ಹಾರೋ ಹಾಗೆ ನಕ್ಕಿದ್ದು..
ಪ್ರೊಫೆಸರುಗಳು 'ಅರಮನೆ'ಗೆ ಹೋಗಿ 'ಹೋಮ ಹವನ' ಮಾಡುವಾಗ ಕೆಕ್ಕರಿಸಿ ನೋಡೋದು..
'ಮಾಡವ ನೋಡವ ಕೇಳವ ಹೋಗವ' ಅನ್ನೋ ಎಚ್ ಓ ಡಿಯ ಮಾತುಗಳು..
"ಆಲ್ ಡಾಂಬರ್ ಕಂ ಹಿಯರ್" ಅಂತ ಲ್ಯಾಬ್ ಮೇಷ್ಟ್ರು ಕೂಗಿದ್ದು..
'ಹುಡಿಕಂಡ್' ಹೋಗಿ ಮಾತಾಡ್ಸಿದ್ದಕ್ಕೆ ಖುಷಿ ಪಟ್ಟ ಮೇಡಂ..
ಜೆರಾಕ್ಸ ಅಂಗಡಿ ಆಂಟಿ ಅಂಕಲ್ ಜೊತೆ ಹರಟಿದ್ದು..
ಬ್ಯಾಂಕಿನ ಕ್ಯಾಷಿಯರ್ ಒಂದು ರೂಪಾಯಿ ಚಿಲ್ರೆ ಕೊಡಲಿಲ್ಲ ಅಂತ ಗಲಾಟೆ ಮಾಡಿದ್ದು..
ನೆನಪು ಮಾಡ್ಕೋತಾ ಇದ್ರೆ ಪುಂಖಾನುಪುಂಖವಾಗಿ ಬರುವಂಥವು...ಒಟ್ಟಾರೆ ನನ್ನ ಜೀವನದ ಅತ್ಯಮೂಲ್ಯ ೪ ವರ್ಷದ ಅನುಭವ ಇದು.. 
ಇವೆಲ್ಲದರ ಮತ್ತು ಗೆಳೆಯರೊಡನೆ ಇರೋ ಬಾರೋ ಜಗ ಎಲ್ಲ ಸುತ್ತಿದ್ದರ ಒಂದು ತುಣುಕು ಇಲ್ಲಿದೆ..