Thursday, November 4, 2010

UK Trip

ಬೆಂಗಳೂರಿಗೆ ಬಂದ ಮೇಲೆ, ಸಂತೋಷವಾಗಿ ಕಳೆದ ವೀಕೆಂಡ್ ಅಂದ್ರೆ ಮೊನ್ನೆಯದ್ದೆ!! ಮೈಸೂರಿನ ಗೆಳೆಯರೆಲ್ಲ ಕೂಡಿ UK (ಉತ್ತರ ಕನ್ನಡ) trip ಮಾಡಿ ಬಂದೆವು!! ಉಂಚಳ್ಳಿ ಜಲಪಾತ, ಮಾಗೋಡು ಜಲಪಾತ, ಸಾತೋಡಿ ಜಲಪಾತ, ಬನವಾಸಿ ಹಾಗೂ ಜೊತೆಗೆ ರಾಮಚಂದ್ರಾಪುರ ಮಠ ಮತ್ತು ಕೊಡಚಾದ್ರಿಯ ಚಾರಣ ಕೂಡ ನಮ್ಮ ಕಾರ್ಯಕ್ರಮದಲ್ಲಿದ್ದುವು! ಎಲ್ಲವನ್ನೂ ನಿರ್ವಿಘ್ನವಾಗಿ ಕಣ್ತುಂಬಿಸಿಕೊಂಡು  ಬಂದೆವು!

ಸಾತೋಡಿ ಜಲಪಾತ ನೋಡಿದ ಮೇಲೆ ಅನ್ನಿಸಿದ್ದು - "ಮಳೆಗಾಲ ಇಷ್ಟೇ ಸೈ ಏನು?"
ಏಕೆಂದರೆ, ನಾನು ಇಲ್ಲಿಗೆ ಮೊದಲೊಮ್ಮೆ ಬಂದಿದ್ದಾಗ ಅಗಾಧ ಪ್ರಮಾಣದ ನೀರಿತ್ತು.. ಈಗ ಏಕೋ ಕೊಂಚ ಸೊರಗಿದ ಹಾಗೆನಿಸಿತು.. ಸಾಗುವ ದಾರಿಯಲ್ಲಿ ಚಿರತೆ ಮರಿಯ ದರ್ಶನ ನಮಗೆ ರೋಮಾಂಚನ ತಂದಿತು.. ಸಾಗುವ ದಾರಿಯ ಎಡಬದಿಯಲ್ಲಿ ಹರಡಿಕೊಂಡಿರುವ ಕೊಡಸಳ್ಳಿ ಜಲಾಶಯದ ಹಿನ್ನೀರು 'ಮಾನಸ ಸರೋವರ'ದ ನೆನಪು ತಂದಿತು.






ಮಾಗೋಡು ಜಲಪಾತ ಮತ್ತು ಅದರ ರುದ್ರ ಕಣಿವೆ ಮೈ ಝುಮ್ಮೆನ್ನುವಂತೆ ಮಾಡಿತು .. ಮೋಡ ಕವಿದಿತ್ತಾದ್ದರಿಂದ ಜೇನುಕಲ್ಲು ಗುಡ್ಡದ ಸೂರ್ಯಾಸ್ತ ಕೊಂಚ ನಿರಾಸೆಯುಂಟು ಮಾಡಿತು.. ಅದರೂ, ಆ ನಿಸರ್ಗದ ಮಡಿಲಿನಲ್ಲಿ ನಮ್ಮನ್ನೇ ನಾವು ಮರೆತಿದ್ದೆವು!





ಸಾತೋಡಿ ಹಾಗೂ ಮಾಗೋಡು, ಎರಡನ್ನೂ ಒಂದೇ ದಿನ ಮುಗಿಸಿದೆವು. ಮಾರನೆಯ ದಿನಕ್ಕೆ ನಾನು ಕಾತರದಿಂದ ಕಾಯುತ್ತಿದ್ದೆ. ಯಾಕಂದ್ರೆ, ಆವತ್ತು ಉಂಚಳ್ಳಿ ಜಲಪಾತ ನೋಡೋದಕ್ಕೆ ಹೋಗುತ್ತಿದ್ದೆವು!  ವೈಯಕ್ತಿಕವಾಗಿ ನನಗೆ ಅತಿ ಹೆಚ್ಚು ಇಷ್ಟವಾಗುವ ಜಲಪಾತ
ಅಂದ್ರೆ ಉಂಚಳ್ಳಿ (ಕೆಪ್ಪ ಜೋಗ). ಹಿಂದಿನ ರಾತ್ರಿ ಹೊಡೆದ ಹುಚ್ಚು ಕುಂಭದ್ರೋಣ ಮಳೆಗೆ ನೀರು ಹೆಚ್ಚಾಗಿ, ಜಲಪಾತ ಕಣ್ಣಿಗೆ ಕಾಣದೆ ಇರುವಷ್ಟು ನೀರಿನ ಎರಚಲು ಮತ್ತು ಮಂಜು ಮುಸುಕಿಬಿಟ್ಟಿತ್ತು. ಆಗೊಮ್ಮೆ ಈಗೊಮ್ಮೆ ದರ್ಶನಭಾಗ್ಯ ದೊರೆಯಿತು. ಸ್ವರ್ಗದ ಬಾಗಿಲಿನಲ್ಲಿ ನಿಂತ ಹಾಗಿತ್ತು ನನ್ನ ಸ್ಥಿತಿ.. ಏನು ರಭಸ, ಏನು ಪ್ರಮಾಣ, ಏನು ನಯನ ಮನೋಹರ! ನಂತರ ಬನವಾಸಿಯನ್ನು ಕಂಡು 'ಈ ನಾಡಿನಲ್ಲಿ ಹುಟ್ಟಿರೋದು ನಮ್ಮ ಪುಣ್ಯ' ಅಂತ ಮಾತಾಡಿಕೊಳ್ತ ವಾಪಸ್ಸು ಬಂದೆವು!








ನನ್ನ ಮಲೆನಾಡಿನ ಜೀವನದ ಕನಸಿಗೆ ಇಂಬು ಕೊಟ್ಟ ಈ ಟ್ರಿಪ್ ಅನ್ನು ಮರೆಯಲಾಗುವುದಿಲ್ಲ!

Thursday, September 23, 2010

ಕೃತಜ್ಞ(ಘ್ನ)

ಸತ್ತ ಆ ಪಾದಪದ
ತುತ್ತ ತುದಿಯೊಳಗಿರುವ |
ಕಡ್ಡಿಗಳ ಮೆತ್ತನೆಯ
ಗೂಡಿನೊಳಗಿಂದ ||

ಹಸಿವೆಯಿಂ ಬಳಲುತ್ತ
ಬಿಸಿಲಿನಿಂ ಕಂಗೆಡುತ
ಚಿತ್ತದಲಿ ಮತ್ತನೇ-
-ರಿಸುವ ಆ ಖಗದ..
ತತ್ತಿಯೊಳಗಿಂದ ತಾ
ಕತ್ತ ಹೊರ ಹಾಕುತ್ತ
ಅತ್ತಿತ್ತ ತಿರುಗಿ ಕೈ
ತುತ್ತ ನೀಡೆನಲು

ಅತ್ತಿತ್ತ ಅಲೆದಲೆದು
ಹತ್ತು ಕಡೆಗಳ ಸುತ್ತಿ
ತಾ ಹೆತ್ತ ಕರುಳ ಬ-
ಳ್ಳಿಗೆ ತುತ್ತನಿಡುತ

ತನ್ನೆರಕೆಯೋಸರಿಸಿ
ನೆಳಲಾಸಗೈಯುತ್ತ
ನಿಜ ಬದುಕ ತೇವ ತಾ-
-ಯಿಯನು ತಾ ತೊರೆದು
ಬಲಿತ ಆ ಯುವ ಖಚರ
ಹೆತ್ತ ಹೃತ್ ಸೀಳುತಲಿ
ಕಾವಿತ್ತ ಕಾಯವನು
ತ್ಯಜಿಸಿ ತೆರಳುತಿದೆ...!



( ನಲ್ಮೆಯ ಅಜಯ ಕೃಷ್ಣನಿಗೆ ಧನ್ಯವಾದಗಳು)

Friday, July 30, 2010

ನನ್ನ ಖಯಾಲಿ

ಕಡೆಗೂ ನನ್ನ ಇನ್ನೊಂದು ಬ್ಲಾಗ್ ರೂಪಿಸುವ ಬಯಕೆ ಇಂದಿಗೆ ಫಲಿಸಿದೆ! ಅಲ್ಲಿ ಇಲ್ಲಿ ತಿರುಗಾಡುತ್ತ ತೆಗೆಯುವ ಛಾಯಾಚಿತ್ರಗಳ ಬ್ಲಾಗ್ ಒಂದನ್ನು ರೂಪಿಸುವ ಯೋಚನೆ ಬಹಳ ದಿನಗಳಿಂದಲೂ ಇತ್ತು. ಈಗ ಅದು ವಾಸ್ತವಕ್ಕೆ ಬಂದಿದೆ.
ನನ್ನ ಹೊಸ ಬ್ಲಾಗನ್ನೂ ಕೂಡ ಬೆನ್ನು ತಟ್ಟಿ ಪ್ರೋತ್ಸಾಹಿಸ್ತೀರಿ ಅನ್ನೋ ಆಶಾಭಾವ ನಂದು!
ಇದು ನನ್ನ ಬ್ಲಾಗ್.. ನನ್ನ ಖಯಾಲಿ !!

Tuesday, July 20, 2010

ತುಲನೆ!

ಜಿನುಗುನುಗುತಿದೆ ಆಷಾಢದ ಮಳೆಯು..
ಮೆಲ್ಲ ನಗುತಿಹುದು ಹೂ-ಪಕಳೆಯು!

ಮೇಘರಾಜ ಮರೆಮಾಚಿ ನೇಸರನ
ಆಡುತಿಹನಾಟ ಬಾನಂಗಳದಲಿ..

ವರುಣ ತಾ ಭೂರಮೆಯ ತಣಿಸುತಿಹ
ಅಮರ ಪ್ರೇಮಿಯು ತಾ ನಾಚುವೆನಿತು!

ಧರಣಿಕುಲೆ ಹೂ ಮುಡಿದು ನಲಿದಿಹಳು
ಪ್ರಿಯನ ಅಮೃತಧಾರೆಯ ಮೆಲ್ಲ ಹೀರಿಹಳು!

ಅಲ್ಪ ಮನುಜಮತಿಯ ತೋರಿಸುತ್ತ..
ಸುತ್ತುವರಿದರೂ ಸದಾ ಪ್ರಿಯೆಯ ಸುತ್ತ,
ನೀಡಬಲ್ಲನೆ ಸಖನು ಇಂತಿಪ್ಪ ಮಳೆ-ಭುವಿಯ ತೆರದಿ ಸವಿಯಾದ ಮುತ್ತ?

Friday, July 16, 2010

ಜೀವ - ಜೀವನ.

ನನಗೀಗ ೨೨ ನೇ ವರ್ಷ ನಡೀತಾ ಇದೆ. ಬುದ್ಧಿ ಬಂದಾಗಿನ್ದ್ಲೂ, ಅಂದ್ರೆ ಸುಮಾರು ೧೯ ವರ್ಷಗಳಿಂದಲೂ ನನ್ನ ಪ್ರಪಂಚ ಒಂದೇ - "ಮೈಸೂರು".
ಏನಿಲ್ಲ ಈ ಊರಲ್ಲಿ? ಖಾಲಿ ಖಾಲಿ ರಸ್ತೆಗಳು, ನಂಬಿಕಸ್ಥ ಜನಗಳು. ನೆಳಲನೀವ ಮರಗಳು, ಮುದವನೀವ ಕೆರೆಗಳು! ಧರ್ಮ ಬೆಳಗಿಪ ಗುಡಿಗಳು!

೧೦ ನಿಮಿಷದಲ್ಲಿ, ಮಾಯಾನಗರಿ ಬೆಂಗಳೂರಲ್ಲಿ ಒಂದು ರಸ್ತೇನ ಆ ಕಡೆಯಿಂದ ಈ ಕಡೆ ದಾಟೋಕೆ ಹೆಣಗಾಡಬೇಕು.. ಅದೇ ೧೦ ನಿಮಿಷ  ತಗೊಂಡು, ಒಂದು ಗಾಡಿ ಇದ್ರೆ, ಇಡೀ ಮೈಸೂರನ್ನೇ ಒಂದು ಸುತ್ತು ಹಾಕಬಹುದು. ಅದೇ ಮೈಸೂರು! ಎಲ್ಲಿಂದೆಲ್ಲಿಗೆ ಹೋದರೂ ಅಬ್ಬಬ್ಬ ಅಂದ್ರೆ ೧೫ ನಿಮಿಷ ತಗೊಂಡ್ರೆ ಹೆಚ್ಚು! ಬೇಕಾದಾಗ ಕಾರಂಜಿ ಕೆರೆ, ಬೇಡವಾದಾಗ ಕುಕ್ಕರಹಳ್ಳಿ ಕೆರೆ. ಖುಷಿ ಆದ್ರೆ ಚಾಮುಂಡಿ ಬೆಟ್ಟ - ರಸ್ತೆ ಮೇಲೆ. ಪುರುಸೋತ್ತಿದ್ರೂ ಚಾಮುಂಡಿ ಬೆಟ್ಟ - ಮೆಟ್ಟಿಲು ಹತ್ಕೊಂಡು! ಉತ್ತರಕ್ಕೆ ಅರ್ಧ ಗಂಟೆ ಶ್ರೀರಂಗಪಟ್ನ, ದಕ್ಷಿಣಕ್ಕೆ ಅರ್ಧ ಗಂಟೆ ನಂಜನಗೂಡು! ಪಶ್ಚಿಮಕ್ಕೆ ಅರ್ಧ ಗಂಟೆ ಸೋಮನಾಥಪುರ, ಪೂರ್ವಕ್ಕೆ ಅರ್ಧ ಗಂಟೆ ಮೀನಾಕ್ಷಿಪುರ! ಕೂಗಳತೆಯ ದೂರದ ರಂಗಾಯಣ, ನಟನ.. ಹ್ಮ್ಮ್ಮ್... ಇನ್ಮೇಲೆ ಇವೆಲ್ಲ ನಂಗೆ 'ಇತಿಹಾಸ' ಆಗುತ್ತೋ ಏನೋ ಅಂತ ದಿಗಿಲಾಗ್ತಿದೆ! ದಿನಾ ಬೆಟ್ಟ ಹತ್ತಿ ಇಳಿಯೋದ್ರಲ್ಲಿ ಇರೋ ಖುಷಿನೇ ಬೇರೆ. ಬಂಡೆ ಮೇಲೆ ಕೂತು ಇಡೀ ಊರನ್ನೇ ನೋಡೋ ಮಜಾ ಇನ್ನೇನು ಮುಗಿಯುತ್ತಲ್ಲ ಅನ್ನೋ ಬೇಸರ. ಜಿ.ಟಿ.ಆರ್. ಮಸಾಲೆ ದೋಸೆ, ಗ್ರೀನ್ ಲೀಫ್ ಬಿಸಿ ಬಿಸಿ ಕಾಫಿ, ಬಾಂಬೆ ಟಿಫಾನೀಸ್ - ಮಹಾಲಕ್ಷ್ಮಿ ಸ್ವೀಟ್ಸ್ ಮೈಸೂರು ಪಾಕ್! ಸಿಂಡ್ರೆಲಾ-ಅಕ್ಲು ಆಲೂ ಪರಾಟ,., ಮಹೇಶ್ ಪ್ರಸಾದ್ ಇಡ್ಲಿ ವಡೆ.. ಖಾನ ಖಜಾನ ಮಲ್ಲಿಗೆ ಇಡ್ಲಿ..ಫಲಾಮೃತ ಐಸ್ ಕ್ರೀಮ್..ಹನುಮಂತು ಚಿಕನ್ ಬಿರಿಯಾನಿ, ಆರ್.ಆರ್.ಆರ್ ಅನ್ಲಿಮಿಟೆಡ್ ಊಟ, ಚಾಟ್ ಸ್ಟ್ರೀಟ್ ಬಗೆ ಬಗೆ ಭಕ್ಷ್ಯಗಳು...ಅಯ್ಯೋ ಏನೇನೆಲ್ಲ ಬಿಟ್ಟು ಹೋಗಬೇಕೋ ದೇವನೇ! ಇವೆಲ್ಲ ಬೇರೆ ಕಡೆನೂ ಸಿಗಬಹುದು, ಅಥವಾ ಇದಕ್ಕಿಂತ ಚೆನ್ನಾಗಿರಬಹುದು. ಆದ್ರೆ ಈ "ಇವುಗಳು" ಕೊಡೊ ಮುದ ಬೇರೆ ಏನೂ ಕೊಡಕ್ಕಾಗದೆ ಇರಬಹುದು! :)

ಇಷ್ಟೆಲ್ಲಾ ಪೀಠಿಕೆ ಯಾಕೆ ಅಂದ್ರೆ, ಜೀವನೋಪಾಯ ಹುಡುಕ್ಕೊಂಡು ಮಾಯಾನಗರಿ ಬೆಂಗಳೂರಿಗೆ ಹೊರಡೋದಕ್ಕೆ ನನ್ನನ್ನು ನಾನು ತಯಾರು ಮಾಡಿಕೊಳ್ತಾ ಇದ್ದೀನಿ! ಮೈಸೂರು ನಂಗೆ ಎಷ್ಟು ಒಳ್ಳೇ ರೀತೀಲಿ ಬೇಕಾದಷ್ಟು ವಿಷಯಗಳನ್ನು ಕಲಿಸಿದೆಯೋ, ಅದೇ ರೀತಿ ಬೆಂಗಳೂರು ಮಾಡುತ್ತ ಅನ್ನೋದು ನನ್ನ ಮುಂದಿರುವ ಪ್ರಶ್ನೆ! ಅದು ನನ್ನನ್ನು ಅಪ್ಪಿಕೊಳ್ಳದಿದ್ದರೂ ಸೈ, ಸುಮ್ಮನೆ ಒಪ್ಪಿಕೊಂಡರೆ ಸಾಕು :)
ನನಗಲ್ಲಿ ಒಳಿತಾಗದಿದ್ದರೂ ಚಿಂತಿಲ್ಲ, ಕೆಡುಕಾಗದಿದ್ದರೆ ಸಾಕು! ವೈಪರೀತ್ಯ ನೋಡಿ, ಜೀವನ ಹುಡುಕ್ಕೊಂಡು, ಜೀವದ ಊರನ್ನು ಬಿಡೋ ಥರ ಆಗಿದೆ ಪರಿಸ್ಥಿತಿ! ಒಮ್ಮೆ ಯೋಚನೆ ಬರೋದು ಹೇಗೆ ಅಂದ್ರೆ, ಬಯಲು ನಾಡು ಮೈಸೂರನ್ನ ಇಷ್ಟು ಪ್ರೀತಿಸೋ ನನಗೆ ಹೀಗನ್ನಿಸುವಾಗ, ಮಲೆನಾಡು-ಕರಾವಳಿ ಮಂದಿ ಅದ್ಹೇಗೆ ಇರ್ತಾರೋ ಅಂತ! ಅಂತಹವರನ್ನ ನೋಡ್ಕೊಂಡ್ ಸಮಾಧಾನ ಮಾಡ್ಕೊಬೇಕು ಅಷ್ಟೇ!

ಬೈ "MY"ಸೂರು!

Tuesday, June 1, 2010

ಅರಿಕೆ!

ಆಹ್! ಪರೀಕ್ಷೆಗಳು, ಪ್ರಾಜೆಕ್ಟ್ ಕೆಲಸ, ಸೆಮಿನಾರು, ನೋಟ್ಸ್ ಹೊಂದಿಸಿಕೊಳ್ಳೋ ಗಡಿಬಿಡಿಯೊಳಗೆ ಇತ್ತ ಬರಲೇ ಆಗಲಿಲ್ಲ. ನಾಳೆ ಒಂದು ಪರೀಕ್ಷೆ ಇದೆ! ಕೊನೆಯದ್ದು. ಮುಗಿದರೆ ನನ್ನ ಇಂಜಿನಿಯರಿಂಗ್ ಮುಗಿದ್ಹಂಗೆ ಲೆಕ್ಕ! ನೀವೇ ಹೇಳಿ, ಒಂದೇ ಸಲಕ್ಕೆ ಎಷ್ಟು ಅಂತ ಓದೋದಕ್ಕೆ ಆಗತ್ತೆ? ಮಧ್ಯ ಮಧ್ಯ ಏನಾದರೂ ಟೈಮ್ ಪಾಸ್ ಮಾಡ್ಬೇಕಲ್ವೆ? ಕಳೆದ ಪರೀಕ್ಷೆಗೆ ಓದಿ ಓದಿ ತಲೆ ಗಿರಕಿ ಹೊಡ್ಯೋಕೆ ಶುರುವಾದಾಗ, ಕೈಲಿದ್ದ ಪೆನ್ನು ಪೇಪರ್ ತಗಂಡು ಈ ಪದ್ಯ ಗೀಚಿದೆ. ನನಗಂತೂ ಇಷ್ಟ ಆಗ್ಹೋಯ್ತು..ನಿಮ್ಗೆ ಏನನ್ಸುತ್ತೋ ...ಓದಿ ಹೇಳಿ :)

ಎದುರು ಬಂದ ಹೆಣ್ಣಿಗೆ
ಎದೆಯ ಕದ ದೂಡುವ ತವಕವಿಲ್ಲ..
ಬಾಗಿಲು ಬಡಿವ ಸದ್ದು ಕೇಳಿ 
ಹುಚ್ಚೆದ್ದು ಕುಣಿವ ಮನಕೆ ಪುಳಕವಿಲ್ಲ!

ತ್ವರಿತ ಹರಿತ ನಯನ ಶರವು
ನಾಟೆ ಘಾಸಿ ಪುಟ್ಟ ಎದೆಯು
ಚತುರ ಹಸಿತ ಕೇಳಿ ಕರ್ಣ
ಕೇಳದೆನ್ನ ಮಾತೆ ಇನ್ನ..

ಮಲೆಯ ಸೊಬಗ ಕಟಿಯು ಅದುವೆ 
ನದಿಯ ತೆರದಿ ಬಳಸುವಾಸೆ ಎನಗೆ..
ಅಶ್ಮ ವೃಕ್ಷ ಹೊಯ್ಗೆಯೆಲ್ಲ ತೊಯ್ದು
ಕಲಿವೆ ಹರಿತವಂಚ ಮೃದುವಾಗಿಸುವ ಬಗೆ!

ಎಷ್ಟು ದರ್ಪವಿದ್ದರೇನು ...
ಸುತ್ತುತಿಹುದು ಕಿರುಬೆರಳು ಸೆರಗ..
ಕೆರೆಯುತಿಹುದು ಕಾಲ್ಬೆರಳು ನೆಲವ..
ಮನ ನುಡಿಯುತಿಹುದು..
ಆ ನೆಲವೇ ನನ್ನೆದೆಯ ಕದವಾಗಬಾರದೇ?



Thursday, March 18, 2010

ರಾಧೆ

ಮಧುಮಾಧವನಿಗೆ ಮದುವೆ!
ವಿರಹಿ ರಾಧೆ ತಾ ವಧುವೇ??
 ಇನ್ನೆಷ್ಟು ಯುಗ ವಿರಹಿಯಾಗಿರ್ಪುದು ತರ ರಾಧೆ?

ವಧುವಾಗುವಳೇ ದೇವಕೀಸುತ ಕಂಸಾರಿಗೆ?

ವಧುವಾಗುವಳೇ ಯಶೋದಾತನಯ ಪೂತನ್ಯಂತಕನಿಗೆ?

ವಧುವಾಗುವಳೇ ಕಿರುಬೆರಳ ತುದಿಯಲಿ ಬೆಟ್ಟವ ಪಿಡಿದವಗೆ?

ವಧುವಾಗುವಳೇ ಆಬಾಲ್ಯ ಅನುಗಾಲ ಬಳಿಯಿದ್ದವಗೆ..?

ವಧುವಾಗುವಳೇ ಮೂಲೋಕವೂ ಕಾಣಲು ಹಾತೊರೆಯುವಂಥವಗೆ?

ಇಲ್ಲವೇ..
.
.
.
.
 ವಧುವಾಗುವಳೇ ವಿವಾಹ ವೇದಿಕೆಗೆ ನುಗ್ಗಿ ,
ಮದುಮಗಳ ಸೆಳೆದೆಳೆದ ಅಪಹರಣಕಾರನಿಗೆ?

ವಧುವಾಗುವಳೇ ಶಮಂತಕದಾಸೆಗೆ 
ಪ್ರಾಣಿಯ ಮಗಳ ಪಾಣಿಗ್ರಹಣ ಮಾಡಿದವಗೆ?

ವಧುವಾಗುವಳೇ ಅಸುರನಡಗಿಸಿ ಗೆಲಿದ 
ಸಹಸ್ರ ಸಹಸ್ರ ಸ್ತ್ರೀಯರ ಹೃಚ್ಚೋರನಿಗೆ?

ವಧುವಾಗುವಳೇ ಮೋಹದಿಂ ಸತ್ಯಭಾಮೆಯ ವರಿಸಿದವಗೆ?

ವಧುವಾಗುವಳೇ ಗೋಪಾಂಗನೆಯರ ಅಂಗವಸ್ತ್ರಗಳ ಅಡಗಿಸಿದವಗೆ?

ವಧುವಾಗುವಳೇ ಮಾಯೆಯಿಂ ಊರುಭಂಗವಗೈಸಿ 
ಕುರುಜ್ಯೇಷ್ಠನಂ ಕೊಂದವಗೆ?

ವಧುವಾಗುವಳೇ ತನ್ನ ಮರೆತು 
ಸ್ವಹಿತ ಸಾಧಿಸಿದ "ಸರ್ವೋತ್ತಮ"ನಿಗೆ?

ಇಷ್ಟಕ್ಕೂ ರಾಧೆ ಇಂಥವನಿಗೆ ವಧುವಾಗುವುದು ವರವೇ? ತರವೇ? ಧರ್ಮವೇ?