Wednesday, December 30, 2009

ಆ ದಿನ..


ಎಂದು ಬಹುದು ಆ ದಿನ?
ನಿಜ ಜಗದ ಅರಿವಾಗುವ ದಿನ!
'ಸತ್ಯ'ಕ್ಕೇ 'ಜಯ'ವೆಂಬ 'ಸುಳ್ಳು' ಅರಿವಾಗುವ ದಿನ..
ಪ್ರೀತಿಗೂ ಭೀತಿಯೆಂದು ಸಾಬೀತಾಗುವ ದಿನ!
ಜಾತಿ ಭೇದಗಳ ಶೃಂಖಲೆಯೊಳು ಸಿಲುಕಿ
ನಾವೇ ನಮಗೆ ಅಸಹ್ಯವೆನಿಪ ದಿನ!
ದೈವಗಳು, ದೈತ್ಯರು, ಎಲ್ಲವೂ ನಾವೇ ಎಂದು ಅರಿವ ದಿನ..

ಅಹುದಹುದು!
ಆ ದಿನ ಬೇಗ ಬಂದೇ ಬಹುದು..

ಧರೆ ಹೊತ್ತಿ ಉರಿಯುತಿದೆ
ಮನ ಮೆಲ್ಲ ಸೊರಗುತಿದೆ
ಮನುಕುಲವೇ ನಾಶಗೈಯುತಿದೆ ಈ ದಿನ..

ಎಲ್ಲವೂ ಅಳಿದ ಮೇಲೆ ಮುಂದೊಂದು ದಿನ,
ಬಂದೇನು ಪ್ರಯೋಜನ "ಆ ದಿನ"?

ಸೂತ್ರ

ಬದುಕೆಂಬ ಗಡಿಬಿಡಿಯ ಸಂತೆಯೊಳು..
ಮನದಿ ನಿನ್ನ ನೆನಪು ಚಿತ್ತಾಕರ್ಷಕ ರಂಗವಲ್ಲಿ!
ಆ ನಿನ್ನ ನೆನಪು ಸೋನೆ ಮಳೆಯಾಗಿ ಸುರಿಯೆ..
ನಿನ್ನ ಪ್ರೀತಿಯ ಸೋನೆಯೊಳು ನಾ ತೋಯ್ದು ಹೋಗುವೆ..
ನಿನ್ನ ಆ ನೆನಪು ಸೋನೆ ಮಳೆಯಾಗಿಯೇ ಸುರಿಯಲಿ.
ಏಕೆಂದರೆ ಸೋನೆ ಮಳೆಯ ಮುದ ಇನ್ನಾವುದಕ್ಕಿದೆ?
ನಾ ಬದುಕಿರಲು ನಿನ್ನ ನೆನಪೇ ಉಸಿರು!
ನಿನ್ನ ನೆನಪಿನ ವಿನಾ ನಾ ಬರಿದೆ ದೇಹ ಮಾತ್ರ..
ಇದೆ ಪ್ರೀತಿಯ ಸರಳ ಸೂತ್ರ.