Sunday, February 21, 2010

ವಿರಹಿ

ಕದ್ದಿಂಗಳ ಬಾನ
ದಿಟ್ಟಿಸುವಾಗ
ಶಶಿಯಂತೆ ಬಪ್ಪುದು...
ನಿನ್ನ ನೆನಪು.

ಕಣ್ಮಿಟುಕುಗಳೇ
ಕೋಟಿ ಚುಕ್ಕಿಗಳು..
ನಿನ್ನ ಸಲುಗೆಯಿಂದಲಿ
ಬಾನ್ದೇವಿ ಸೊಕ್ಕಿಹಳು!

ಖಗ ವಿಲಾಸವೇ
ಮಧುರ ಮಂದಹಾಸ..
ಕೋಲ್ಮಿಂಚ ಕಿರುನಗೆಯೇ
ಸೆಳೆದೆಳೆವ ಪಾಶ..

ನಮ್ಮೀರ್ವರ ನಡುವೆ
ಏತಕೀ ಗ್ರಹಣ?
ನಿನ್ನ ನೆನಪಿಲ್ಲದಿರೆ ನಾ ,
ಚಂದ್ರನಿರದ ಚಕೋರನಂತೆ
ಕಮಲವಿಲ್ಲದ ಕೆರೆಯಂತೆ..
ಸ್ವರ ಹೊರಡದ ವೀಣೆಯಂತೆ..
ಪ್ರಾಣ ತ್ರಾಣವಿರದ ಬರಿದೆ ದೇಹ ಮಾತ್ರ ನಾ!

Tuesday, February 9, 2010

ಮಿಲನ



ಮುಂಜಾವ ಮಬ್ಬಿನಲಿ
ನೆಲದಗಲ ಇಬ್ಬನಿಯು..
ವಜ್ರ ಸಿಗ್ಗಾಗಿಸುವ
ಇಳೆಯ ಬಿನ್ನಾಣ..

ನೀರ್ಗಲ್ಲು ತೋಯುತಿದೆ
ನಸುಕಿನಲೂ ನಲಿಯುತಿದೆ,
ರಾಗ ರಾಗಿಣಿಯಂತೆ
ಮಧುರ ಮಿಲನ.

ಪ್ರತ್ಯೂಷೆಯ ನೀರವದ
ನಭದ ನಿತ್ಯೋದಯಕೆ
ಬರುತಿಹss ನೇಸರನ
ಕಾಣಲುನ್ಮಾದ!

ಹರಿಣ ಹರಿಣಿಯ ಕೂಡೆ,
ನಾಗ ನಾಗಿಣಿ ಸೇರೆ..
ಅಂತೆ ಭುವಿ ರವಿ ಕೂಡ
ಒಂದಾಗೆ ಮಿಗೆ ಜೀವನ..


Monday, February 1, 2010

ಭೃಂಗಸಂಗಮ

ಅಂಗನೆಯಾಲಿಂಗನದೊಳು 
ಹೃದಂಗ ತಪ್ತವಾಗಿರೆ..
ಆ ಭೃಂಗಸಂಗಮ ಭಂಗವಾಗೆ,
ಬಡಿದ ಮೃದಂಗ ನಾದ ಮಡಿದಂತೆ!