Tuesday, November 15, 2011

ವಸ್ತು

ದಿನಗಳೆದಂತೆ ಹಳತಾಗುತಿಹ ಸರಕು ನಾನು.
ಮಾಗಿ ಮಾಗಿ ಮಸುಕಾಗುವ ಮುನ್ನ,
ಭೂತ ಭವಿಷ್ಯಗಳ ಸಂತೆಯಲಿ..
ಮತ್ತೊಬ್ಬರ ತೃಷೆಗೆ ಬಿಕರಿಯಾಗುವ ಮುನ್ನ,
ಬಾ ಒಲವೇ!
ಒಲವ ಹಣ ಸುರಿದು ಕೊಂಡುಬಿಡು ಬಂದೆನ್ನ.

Saturday, November 5, 2011

ಮಾರುಕಟ್ಟೆ

ಸಂತೆಯದು ಕಾಳಸಂತೆ!
ಭಾವನೆಗಳು ಬಿಕರಿಯಾಗುವ ಸಂತೆ.
ಜೀವಗಳನ್ನೇ ಬಡಿದು ಬಲೆಗೆ ಹಾಕುವವ, ಬಿಡುವನೇನು ಭಾವನೆಯ?

ಹೀನನ ಮಡದಿಯ ದೀನ ಭಾವನೆಯದು
ನಗುಮೊಗದಿಂದ, ಸ್ವತಂತ್ರ ತಾನಿನ್ನೆಂದು ಭಾವಿಸಿ ಕುಳಿತಿತ್ತು.
ತಿಳಿದಿತ್ತೇನದಕೆ ತಾ ಕುಳಿತ ಜಾಗ - ಅದು ಇನ್ನೊಬ್ಬನ ಹಸಿವ ನೀಗಿಸಲಿರುವ ತಟ್ಟೆಯೊಳಗೆಂದು?

ಸಾವಿರ ಸಾವಿರ ಕೈಗಳು - ಕಾಸು ಹಿಡಿದು ನಿಂತಿದ್ದವು
ನಿಮಿಷಗಳ ಹಾಸಿಗೆಯ ಹುಸಿ ಸೊಗವ ಕಾದು!
ಆ ನೀಚ ಕೈಗಳಿಗೆ ಭಾವನೆಗಳ ಅರಿವಿರಲಿಲ್ಲವೇ?
ಆ ಭಾವನೆಯದು, ತನ್ನ ಅಕ್ಕನದೋ ತಂಗಿಯದೋ ಹೆತ್ತಮ್ಮನದೋ ಎಂದು?

ಹಾದರಗಿತ್ತಿಯರೆಂದು ಸಾದರಪಡಿಸುವ ಈ ಸಮಾಜಕ್ಕೆ - ಅದರ ಗಂಡು ಸಂತಾನಗಳಿಗೆ
ಭಾವನೆಗಳ ಹೊಸಕಿ, ಪಡೆವ ಸುಖದಿಂದ ಪಡೆವೆ ಹೊಸದೇನೆಂಬುದನೆಂದು
ಕಾದು ಕಾದು ಸೊರಗುತಿಹ 'ಸೂಳೆ'ಯರ ಮೇಲೆ
ತೋರಬಾರದೇ ಇಷ್ಟೇ ಇಷ್ಟು ಭಾವುಕತೆ?

ಭವಿಯ ಮನಸಿಗೆ ಭಾವುಕತೆ-ಭಾವನೆಯೆಡೆಗೆ ಒಲವು ಮೂಡುವುದು ಅದೆಂದೋ?!