Thursday, December 22, 2011

ತೇಲಿ ತೇಲಿ ಮುಳುಗಲೇ...?

ನಿನ್ನ ಸಿಹಿಮೊಗದ ನಗೆಗಡಲಲಿ ತೇಲಿಬಹ
ಹಾಯಿದೋಣಿಯ ನಾವಿಕನಾಗುವ ಬಯಕೆ..
-ಈ ಹುಚ್ಚು ಮನಕೆ!
ದಡ ಸೇರಿದರೂ ಸರಿಯೆ,
ತಳ ಮುಟ್ಟಿದರೂ ಸರಿಯೆ.
ನಿನ್ನ ವದನಾಂಬುಧಿಯೊಳಗೆ
ಭದ್ರವಾಗಿರಬಹುದೆಂಬುದೊಂದಾಸೆಯೆನಗೆ!

Friday, December 9, 2011

ನೆರಳು

ನೆರಳನೋಡಿಸಲು ದೀಪ ನಂದಿಸಬೇಕು!
ಇದ್ದರಿತ್ತು ನೆರಳು..ಜೊತೆಯಾಗಿ ಒಂಟಿತನಕೆ.

ನಿಟ್ಟುಸಿರ ರಭಸಕೆ ದೀಪದುರಿ ನಲಿಯದಿರೆ
ನೆರಳು ಮಾತನಾಡುವುದೆನಿತು?

ಬೆಳಕಿಗಿಂತ ಕತ್ತಲೆಯೇ ಚೆನ್ನ
ನಾನು ಮತ್ತು ನನ್ನ ನೆರಳು!
ಬೆಳಕು ಹೊಮ್ಮಿದರೆ ತಿಮಿರವದು ತಿಳಿಯದು.

ಒಂದೇ ಒಂದು ದೀಪದ ಬುಡ್ಡಿ..ಇಲ್ಲವೇ..
ಸಣ್ಣದೊಂದು ಕಂದೀಲಾದರೂ ಸಾಕು.
ಹೆಚ್ಚು ಬೆಳಕಿದ್ದರೆ ನೆರಳ ಹುಡುಕುವುದು ತುಸು ಕಷ್ಟ!



Tuesday, November 15, 2011

ವಸ್ತು

ದಿನಗಳೆದಂತೆ ಹಳತಾಗುತಿಹ ಸರಕು ನಾನು.
ಮಾಗಿ ಮಾಗಿ ಮಸುಕಾಗುವ ಮುನ್ನ,
ಭೂತ ಭವಿಷ್ಯಗಳ ಸಂತೆಯಲಿ..
ಮತ್ತೊಬ್ಬರ ತೃಷೆಗೆ ಬಿಕರಿಯಾಗುವ ಮುನ್ನ,
ಬಾ ಒಲವೇ!
ಒಲವ ಹಣ ಸುರಿದು ಕೊಂಡುಬಿಡು ಬಂದೆನ್ನ.

Saturday, November 5, 2011

ಮಾರುಕಟ್ಟೆ

ಸಂತೆಯದು ಕಾಳಸಂತೆ!
ಭಾವನೆಗಳು ಬಿಕರಿಯಾಗುವ ಸಂತೆ.
ಜೀವಗಳನ್ನೇ ಬಡಿದು ಬಲೆಗೆ ಹಾಕುವವ, ಬಿಡುವನೇನು ಭಾವನೆಯ?

ಹೀನನ ಮಡದಿಯ ದೀನ ಭಾವನೆಯದು
ನಗುಮೊಗದಿಂದ, ಸ್ವತಂತ್ರ ತಾನಿನ್ನೆಂದು ಭಾವಿಸಿ ಕುಳಿತಿತ್ತು.
ತಿಳಿದಿತ್ತೇನದಕೆ ತಾ ಕುಳಿತ ಜಾಗ - ಅದು ಇನ್ನೊಬ್ಬನ ಹಸಿವ ನೀಗಿಸಲಿರುವ ತಟ್ಟೆಯೊಳಗೆಂದು?

ಸಾವಿರ ಸಾವಿರ ಕೈಗಳು - ಕಾಸು ಹಿಡಿದು ನಿಂತಿದ್ದವು
ನಿಮಿಷಗಳ ಹಾಸಿಗೆಯ ಹುಸಿ ಸೊಗವ ಕಾದು!
ಆ ನೀಚ ಕೈಗಳಿಗೆ ಭಾವನೆಗಳ ಅರಿವಿರಲಿಲ್ಲವೇ?
ಆ ಭಾವನೆಯದು, ತನ್ನ ಅಕ್ಕನದೋ ತಂಗಿಯದೋ ಹೆತ್ತಮ್ಮನದೋ ಎಂದು?

ಹಾದರಗಿತ್ತಿಯರೆಂದು ಸಾದರಪಡಿಸುವ ಈ ಸಮಾಜಕ್ಕೆ - ಅದರ ಗಂಡು ಸಂತಾನಗಳಿಗೆ
ಭಾವನೆಗಳ ಹೊಸಕಿ, ಪಡೆವ ಸುಖದಿಂದ ಪಡೆವೆ ಹೊಸದೇನೆಂಬುದನೆಂದು
ಕಾದು ಕಾದು ಸೊರಗುತಿಹ 'ಸೂಳೆ'ಯರ ಮೇಲೆ
ತೋರಬಾರದೇ ಇಷ್ಟೇ ಇಷ್ಟು ಭಾವುಕತೆ?

ಭವಿಯ ಮನಸಿಗೆ ಭಾವುಕತೆ-ಭಾವನೆಯೆಡೆಗೆ ಒಲವು ಮೂಡುವುದು ಅದೆಂದೋ?!


Thursday, April 28, 2011

ಪ್ರೀತಿ ಫಸಲ ಕಟಾವು!

ಪ್ರೀತಿ ಸೋತ ವ್ಯಕ್ತಿಯೊಬ್ಬನ(ನಾನಲ್ಲ) ತೊಳಲಾಟಗಳೇ ಈ ಸಾಲುಗಳಿಗೆ ಇಂಬು ಕೊಟ್ಟವು.. ಕಡೆಯ ಚರಣ ಕೊಂಚ ತೀವ್ರತೆಯಲ್ಲಿ ಹೆಚ್ಚು ಕಮ್ಮಿ ಆಗಿರ್ಬಹುದು. ಅತಿಶಯ ಮಾಡಲಿಕ್ಕೆ ಇಷ್ಟವಾಗ್ಲಿಲ್ಲ. ಹಾಗಾಗಿ ಏನಾಗಿತ್ತು ಅನ್ನೋದು ಸೂಚ್ಯವಾಗಿದೆ.



ಮನದ ಅಂತರಾಳವದು
ಅದರ ಬಯಲಲಿ ಅವಿತು ಕೂತು
ಆ ಬಯಲ ಸಿರಿಹೊನಲ ಮಾಡಿದಾಕೆ..
ಸವಿಮಾತ ಬೀಜ ಸುರಿದು
ಬಿಸಿಮುತ್ತ ಮಳೆಗರೆದು
ಪ್ರೀತಿಯ ಸಿರಿಮೊಳಕೆಯೊಡೆಸಿದಾಕೆ..

ಸುರಿಸುರಿವ ಆ ಮಳೆಗೆ
ಹಸಿರ್ಹಸಿರು ಮೇಲೇಳೆ
ಬಳುಕಿ ಸೊಗಪಡುವೆ ನಿನ್ನುಸಿರ ತಂಗಾಳಿಗೆ!
ತೆರೆ ಸರಿಯೆ ಸುಡು ಬಿಸಿಲು 
ನಡು ರಾತ್ರಿ ಬಿರು ಹಗಲು
ಸವಿಜೇನ ಹೊನಲಹುದು ನಿನ್ಹೆಸರು ನನ ಬಾಳಿಗೆ.

ತೆನೆಹೊತ್ತು ಬೀಗುತಿಹ  
ನನ್ನೊಲವ ಪ್ರೀತಿಯಿದು
ಕಂಡಿತದಾವ ರೀತಿ ನಿನ ಕಂಗಳಿಗೆ?
ತುಂಬಿದೊಡಲ ತ್ಯಾಗವಿದು
ಹಸಿಯಿದ್ದೂ ಹುಸಿಯಾಗದು
ಅದೇತಕಾಸೆಯಾಯಿತೊ ಅನ್ಯರನ್ನದಗುಳಿಗೆ?

Wednesday, March 9, 2011

ಎಂಥಾ ದಿನಗಳವು..

ಅಮ್ಮ ನಂಗೆ ಯಾವಾಗಲೂ ಬೈತಾ ಇರ್ತಾಳೆ.. ನಿನ್ ಗೆಳೆಯರ ಮುಂದೆ ಗಂಭೀರವಾಗಿರು. ಹರಟೆ ಕೊಚ್ಚಬೇಡ ಅಂತೆಲ್ಲ..ಆದ್ರೆ ಗೆಳೆಯರ ಮುಂದೆ ಅಲ್ದೆ ನಾವು ಯಾರ ಮುಂದೆ ನಮ್ಮ ದಡ್ಡತನ, ಹುಂಬತನ, ಅಸೂಯೆ, ಆಸೆ - ಇವೆಲ್ಲವನ್ನೂ ಪ್ರದರ್ಶಿಸೋಕೆ ಸಾಧ್ಯ? ಇದನ್ನ 'ಜನರೇಶನ್ ಗ್ಯಾಪ್' ಅನ್ನಬೇಕೋ ಏನೋ ನಂಗೆ ತಿಳಿಯೋದಿಲ್ಲ. ಆದ್ರೆ ಬದ್ಧ ಅಂದ್ರೆ, ನಮ್ಮ ಕುಟುಂಬದವರ ಹೊರತಾಗಿ ಯಾರ ಮುಂದೆಯಾದ್ರೂ ನಾವು ನಾವಾಗಿದ್ರೆ, ಅವ್ರು ನಮ್ಮ 'ಗೆಳೆಯರು' ಮಾತ್ರ. ಯಾರೋ ಅಪರಿಚಿತರ ಬಳಿ ನಮ್ಮ ದುಃಖ ಸಂಕಟ, ನೋವು ನಲಿವುಗಳು, ಪರಮಾಪ್ತ ಸಂಗತಿಗಳನ್ನ ಹಂಚಿಕೊಳ್ಳೋಕೆ ಸಾಧ್ಯವೇ?

ಗೆಳೆಯರೊಂದಿಗೆ ಕಳೆದ ದಿನಗಳ ನೆನಪುಗಳು ಸದಾ ಹಸಿರು.. ಎಲೆ ಉದುರುತ್ತದೆ ಮತ್ತೆ ಚಿಗುರುತ್ತದೆ. ನಮ್ಮ ಜೀವನಕ್ಕೆ ಹೊಸತನ್ನು ತಂದು ಕೊಡುವುದೇ ಗೆಳೆತನ.. ಹೊಸತನ್ನು ತರುತ್ತದೋ ಇಲ್ಲವೋ, ಆದರೆ ನಮ್ಮ ಮನಃಪಟಲಕ್ಕೆ ಅಂಟಿದ ದುಃಖ ದೂರ ಮಾಡುವ ಮಾಯಾಶಕ್ತಿ ಗೆಳೆತನಕ್ಕಿದೆ..

ನನ್ನ ಅಭಿಯಂತರ ಪದವಿಯ ೪ ವರ್ಷಗಳಲ್ಲಿ ಜೀವನದುದ್ದಕ್ಕೂ ಸವಿಯಬಹುದಾದಷ್ಟು  ಗೆಳೆತನದ ಸವಿ ನನಗೆ ಸಿಕ್ತು! ಆಡದ ತರಲೆ ಆಟಗಳಿಲ್ಲ, ಇಂಥದ್ದರ ಬಗ್ಗೆ ಮಾತಾಡಿಲ್ಲ ಅನ್ನೋ ಹಂಗಿಲ್ಲ. ಆಗಸದ ಕೆಳಗೆ ಸಿಗೋ ಎಲ್ಲ ವಿಷಯಗಳ ಬಗ್ಗೆಯೂ ನಿರ್ಲಿಪ್ತ ವಾಗ್ಝರಿ ಹರಿಯುತ್ತಲಿರುತ್ತಿತ್ತು!! ಇಂಥಾ ಅಭಿಯಂತರ ಪದವಿಯ ೪ ವರ್ಷಗಳು ಘಕ್ಕನೆ ನಿನ್ನೆ ರಾತ್ರಿಯಿಂದ ಬಹಳವಾಗಿ ಕಾಡತೊಡಗಿತು..ನಿಮ್ಮೊಂದಿಗೆ ಅದನ್ನೊಂದಿಷ್ಟು ಹಂಚಿಕೊಳ್ಳೋಣ ಅಂತ ಈ ಪೋಸ್ಟು..

ನಮ್ಮ ಮೇಷ್ಟ್ರೊಬ್ಬರು ನನ್ನನ್ನು ಒಬ್ಬ ಹುಡುಗಿಯೊಡನೆ ಓಡಿಸಿದ್ದು..
ನಾನು ದಿನಾ ಬಿಸ್ಕತ್ತು ಹಾಕುತ್ತಿದ್ದ ನಾಯಿ ನನ್ನನ್ನು ಹಿಂಬಾಲಿಸಿ ತರಗತಿಯೊಳಗೆ ಬಂದಿದ್ದು..
ಪ್ರಾಜೆಕ್ಟ್ ಕೆಲಸದ ನಡುವೆ ಡಿಪಾರ್ಟಮೆಂಟ್ ಒಳಗೆ ಕೇರಂ ಆಡುತ್ತ ಕೂಗಿದ್ದು..
ಸರ್ವೇ ಮಾಡುವಾಗ ಗೆಳೆಯನೊಬ್ಬ "ಲಾಂಗ್ ಜಂಪ್" ಮಾಡಲು ಹೋಗಿ ಸುಮಾರು ೮ ಅಡಿ ಮೇಲಿಂದ ಧಡಾರ್ ಎಂದು ಬಿದ್ದಿದ್ದು..
ಸರ್ವೇ ಮಾಡದೇ ರಿಪೋರ್ಟು ತುಂಬಿದ್ದು..
ರಸಪ್ರಶ್ನೆಗೆ ಪ್ರಶ್ನೆ ಹುಡುಕುತ್ತ ಹರಟುತ್ತ ಕಾಲ ಕಳೆದಿದ್ದು..
ಒಬ್ಬ ಲೇಡಿ ಟೀಚರು ನನ್ನನ್ನು 'ಕಾರು' ಎಂದು ಸಂಬೋಧಿಸಿದ್ದು..
ಪ್ರತಿ ಸಂಜೆ 'ಯಂಪಾ' ಛೋಟಾ ಟೀ ಹೀರಿದ್ದು..
ವಾರಕ್ಕೆ ಒಮ್ಮೆಯಾದರೂ ಚಿಕನ್ ಬಿರಿಯಾನಿ ತಿಂದಿದ್ದು..
ಕಾಲೇಜಿನ ಗಣಪತಿ ದೇಗುಲಕ್ಕೆ ರೌಂಡು ಹೊಡೆದಿದ್ದು..
ಬೈಕ್ ಓಡಿಸುವುದ ಕಲಿತದ್ದು..
ಹುಡುಗೀರ ಹಾಸ್ಟೆಲ್ಲಿಗೆ ಅಮೋಘ ೪ ಬಾರಿ ಧೈರ್ಯವಾಗಿ ಮೇನ್ ಗೇಟ್ ಮೂಲಕ ಪ್ರವೇಶಿಸಿದ್ದು..
ಬ್ರಾಂಚ್ ಫೆಸ್ಟ್ ಆದ ಸಂದರ್ಭದಲ್ಲಿ ಸೀರೆ ಉಟ್ಟು ಬಂದಿದ್ದ ಗೆಳತಿಯರ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದು..
ಪ್ರೊಫೆಸರುಗಳೊಡನೆ  ಹುಚ್ಚರಂತೆ ಕುಣಿದಿದ್ದು..
ಕಾಲೇಜಿನ ವಾರ್ಷಿಕ ಸಂಚಿಕೆಗೆ ಹೊತ್ತಲ್ಲದ ಹೊತ್ತಲ್ಲೂ ಕೆಲಸ ಮಾಡಿದ್ದು..
ಮುದ್ದಿನ ನಾಯಿ 'ಬಬಲ್ಸ್' ಸತ್ತಾಗ ಬೇಸರವಾಗಿದ್ದು..
'ನಿನ್ ಹೆಂಡ್ತೀನ ನೆನ್ಸ್ಕೊಂಡ್ರೆ ನಂಗೆ ಭಾಳ ದುಃಖ ಆಗುತ್ತೆ ರಘು' ಅಂತ ಒಬ್ಬ ಪ್ರೊಫೆಸರು ಇನ್ನೊಬ್ರಿಗೆ ಚುಡಾಯ್ಸಿದ್ದು..
'ಸಾರ್ ಇವ್ನು ಎಫ್ ಟಿವಿ ನೋಡ್ತಾನೆ ಸಾರ್' ಅಂತ ಅದೇ ಪ್ರೊಫೆಸರು ನಮ್ಮ ತರಗತಿಯ ಮುಖಂಡನಿಗೆ ಎಲ್ಲರ ಮುಂದೆ 
ಕಿರುಚಿದ್ದು..
ಪ್ರತೀ ಸಮಾರಂಭದಲ್ಲೂ ಉಪ್ಪಿಟ್ಟು ಕೇಸರಿಬಾತು ತಿಂದಿದ್ದು..
ಜಿಯಾಲಜಿ ಲ್ಯಾಬ್ ನಲ್ಲಿ ಮಾತು ಮಾತಿಗೂ 'ಮುಂಡೇವ' ಅಂತ ಬೈಸ್ಕೊಂಡಿದ್ದು..
"ಚಿತ್ರದುರ್ಗ ಈಸ್ ಕಾಲ್ಡ್ ಎ ಸ್ಟೋನ್ ಡಿಸ್ಟ್ರಿಕ್ಟ್" ಅನ್ನೋ ಮಾತಿಗೆ ಸೂರು ಹಾರೋ ಹಾಗೆ ನಕ್ಕಿದ್ದು..
ಪ್ರೊಫೆಸರುಗಳು 'ಅರಮನೆ'ಗೆ ಹೋಗಿ 'ಹೋಮ ಹವನ' ಮಾಡುವಾಗ ಕೆಕ್ಕರಿಸಿ ನೋಡೋದು..
'ಮಾಡವ ನೋಡವ ಕೇಳವ ಹೋಗವ' ಅನ್ನೋ ಎಚ್ ಓ ಡಿಯ ಮಾತುಗಳು..
"ಆಲ್ ಡಾಂಬರ್ ಕಂ ಹಿಯರ್" ಅಂತ ಲ್ಯಾಬ್ ಮೇಷ್ಟ್ರು ಕೂಗಿದ್ದು..
'ಹುಡಿಕಂಡ್' ಹೋಗಿ ಮಾತಾಡ್ಸಿದ್ದಕ್ಕೆ ಖುಷಿ ಪಟ್ಟ ಮೇಡಂ..
ಜೆರಾಕ್ಸ ಅಂಗಡಿ ಆಂಟಿ ಅಂಕಲ್ ಜೊತೆ ಹರಟಿದ್ದು..
ಬ್ಯಾಂಕಿನ ಕ್ಯಾಷಿಯರ್ ಒಂದು ರೂಪಾಯಿ ಚಿಲ್ರೆ ಕೊಡಲಿಲ್ಲ ಅಂತ ಗಲಾಟೆ ಮಾಡಿದ್ದು..
ನೆನಪು ಮಾಡ್ಕೋತಾ ಇದ್ರೆ ಪುಂಖಾನುಪುಂಖವಾಗಿ ಬರುವಂಥವು...ಒಟ್ಟಾರೆ ನನ್ನ ಜೀವನದ ಅತ್ಯಮೂಲ್ಯ ೪ ವರ್ಷದ ಅನುಭವ ಇದು.. 
ಇವೆಲ್ಲದರ ಮತ್ತು ಗೆಳೆಯರೊಡನೆ ಇರೋ ಬಾರೋ ಜಗ ಎಲ್ಲ ಸುತ್ತಿದ್ದರ ಒಂದು ತುಣುಕು ಇಲ್ಲಿದೆ.. 





Sunday, January 9, 2011

ವ್ಯಾಕರಣದವಾಂತರ

"ಮೋಟುಗೋಡೆಯಾಚೆ ಇಣುಕಿ" ಬ್ಲಾಗಿನಿಂದ ಈ ನನ್ನ ಬರಹಕ್ಕೆ ಸ್ಫೂರ್ತಿ ಪಡೆದಿದ್ದೇನೆ! :) (ಬರೆಯುವ ಧೈರ್ಯ ಮಾಡಿದ್ದೇನೆ)
** ಇದು ನಾನು ಹೈ ಸ್ಕೂಲಿನಲ್ಲಿದ್ದಾಗ ನಡೆದದ್ದು. ಆಗ ನಾನು ಇನ್ನೂ "ಪುಟ್ಟ ಹುಡ್ಗ".**
ನಾನು ಓದಿದ್ದು ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆಯಲ್ಲಿ. ಸ್ಕೂಲಲ್ಲಿ ನನ್ನ ಪ್ರಥಮ ಭಾಷೆ ಸಂಸ್ಕೃತ. ಹೊಸ ಹೊಸ ಭಾಷೆಗಳನ್ನ ಕಲಿಯೋ ಆಸೆಯಿಂದ ಸಂಸ್ಕೃತವನ್ನ ಆರಿಸಿಕೊಂಡಿದ್ದೆ. ಎಂಟು ಮತ್ತು ಒಂಬತ್ತನೆಯ ತರಗತಿಗಳು ಕಣ್ಣು ಮಿಟುಕಿಸುವುದರೊಳಗೆ ಮುಗಿದು ಹೋಗಿದ್ದವು! ಈಗ ಹತ್ತು! 
ದಾರೀಲಿ ಹೋಗುವಾಗ ನಮ್ಮ ಶಾಲೆಯ ಅಂಗಿ ಕಂಡರೆ ಸಾಕು, ಜನ ನಿಲ್ಲಿಸಿ, "ಮರಿಮಲ್ಲಪ್ಪಾಸಾ?" ಅನ್ನೋರು. 
ನಾವು "ಹೂ" ಅಂತಿದ್ವಿ. 
ಅಷ್ಟಕ್ಕೇ ಸುಮ್ನಾಗ್ತಿರ್ಲಿಲ್ಲ. "ಯಾವ್ ಕ್ಲಾಸು?" ಅನ್ನೋರು. 
"ಹತ್ತು". 
"ಯಾವ್ ಸೆಕ್ಷನ್ನು?" 
"ಬಿ" .
"ಓಹೋ ಸಂಸ್ಕೃತಾನಾ..ಅದೇನು ಕಡಿದು ಕಟ್ಟೆ ಹಾಕ್ತೀರೋ ಆ ಭಾಷೇಲಿ"


ಇನ್ನು ಮನೇಲಿ..ಟಿವಿ ನೋಡೋ ಹಂಗಿಲ್ಲ.. ಎಲ್ಲ ಬಂದು, ಸಂಸ್ಕೃತ ತಗೊಂಡಿದೀಯ ಕಷ್ಟ ಇರುತ್ತೆ ಓದ್ಕೋ ಹೋಗು ಅನ್ನೋರು! 


ಆದ್ರೆ, ಅಸಲಿಗೆ, ಸಂಸ್ಕೃತ ನಂಗೆ ಯಾವತ್ತೂ ಕಷ್ಟ ಅನ್ನಿಸಲೇ ಇಲ್ಲ. ಆನಂದದಿಂದ ಅನುಭವಿಸಿ ಪಾಠ ಕೇಳ್ತಾ ಇದ್ದೆ ..ಹಂಗೇ ಅಷ್ಟೇ ಚೆನ್ನಾಗಿ ಪಾಠ ಮಾಡೋರು ಕೂಡ!

ಈಗ ವಿಷಯಕ್ಕೆ ಬರ್ತೀನಿ!
ಹತ್ತನೆಯ ತರಗತಿ. ಒಂದು ಮಂಗಳವಾರ. ಮದ್ಯಾಹ್ನ ಊಟದ ನಂತರ ಮೊದಲ ಕ್ಲಾಸು ಸಂಸ್ಕೃತ. ವ್ಯಾಕರಣ ಅಂತ ಮೊದಲೇ ನಿಗದಿಯಾಗಿತ್ತು. ಹಂಗಾಗಿ, ಅದಕ್ಕೆಂದೇ ಒಂದು 'ವಿದ್ಯಾ ನೋಟ್ ಬುಕ್' ಇಟ್ಟಿರ್ಬೇಕಿತ್ತು. ತಗೊಂಡ್ ಹೋಗಬೇಕಿತ್ತು. ಇಲ್ಲ ಅಂದ್ರೆ ಕ್ಲಾಸಿಂದ ಆಚೆ!
ಸರಿ, ಕ್ಲಾಸು ಶುರುವಾಯ್ತು. ಸಂಧಿಗಳ ಬಗ್ಗೆ ನಮ್ಮ ಮಿಸ್ ಶ್ರೀಮತಿ. ಜಯಶ್ರೀ (RJ) ಪಾಠ ಮಾಡಿದ್ರು. ಅದರಲ್ಲೂ ಗುಣ ಸಂಧಿ. ಗುಣಸಂಧಿಯ  ಸೂತ್ರ, ನಿಯಮಗಳನ್ನೆಲ್ಲಾ ಹೇಳಿಯಾದ ಮೇಲೆ ಒಂದಷ್ಟು ಪದಗಳನ್ನ ಕರಿ ಹಲಗೆಯ ಮೇಲೆ ಬರೆದು, ಬಿಡಿಸೋದಕ್ಕೆ ಹೇಳಿ ತಾವು ಹೋಗಿ ಕುಳಿತುಬಿಟ್ಟರು. ಪದಗಳು ಹೀಗಿದ್ದವು..
ದೇವರ್ಷಿ, ಮಹರ್ಷಿ, ಲೋಕರ್ಷಿ, ಬ್ರಹ್ಮರ್ಷಿ.
ಒಟ್ಟು ನಾಲ್ಕು ಪದಗಳು.
ಇಡೀ ತರಗತಿ ತನ್ಮಯವಾಗಿ ಪದಗಳನ್ನು ಬಿಡಿಸುವಲ್ಲಿ ಮಗ್ನವಾಗಿತ್ತು. 
ಇದ್ದಕ್ಕಿದ್ದಂತೆ, ಮೂರನೇ ಬೆಂಚಿನಿಂದ ಒಂದು ಧ್ವನಿ.. 
"ಲೋ ಮಗ.."
"ಏನೋ ನಿಂದು"
"ಗೊತ್ತಾಗ್ತಿಲ್ಲ ಕಣೋ ಹೆಂಗ್ ಬಿಡ್ಸೋದು ಅಂತ..."
"ಗುಬಾಲೆ..ಈಗಷ್ಟೇ ಹೇಳಿಕೊಟ್ರಲ್ಲೋ ಮಿಸ್ಸು..."
"ಅಂದ್ರೂ ಗೊತಗ್ತಿಲ್ಲ ಕಣೋ..."
ಈ ಎಲ್ಲ ಸಂಭಾಷಣೆ ಜೋರಾಗಿ ನಡೀತಿದೆ..ಕ್ಲಾಸಿಗಿಡೀ ಮಾತುಗಳು ಸ್ಪಷ್ಟವಾಗಿ ಕೇಳ್ತಿದ್ವು!
ಮತ್ತೆ ಮುಂದುವರೀತು...
"ಏನೋ ಗೊತ್ತಾಗ್ತಿಲ್ಲ??"
"ಬ್ರಹ್ಮರ್ಷಿ ಬಿಡ್ಸೋದು ಹೆಂಗೋ?"
"ಬ್ರಹ್ಮ + ಋಷಿ"
"ಸರಿ ಕಣೋ ಮಗ..ಥಾಂಕ್ಸ್.."
ಒಂದೆರಡು ನಿಮಿಷಗಳ ತರುವಾಯ..
"ಮಗಾ"
""ಮತ್ತೆ ಏನೋ ಗೋಳು ನಿಂದು?"
"ಬ್ರಹ್ಮರ್ಷಿ ಬಿಡ್ಸುವಾಗ, ಬ್ರಹ್ಮಂಗೆ "ಬ್ರ " ದೊಡ್ಡದೋ ಚಿಕ್ಕದೋ?"
(ಪಾಪ ಆತ, 'ಬ' ಅಕ್ಷರ ಮಹಾಪ್ರಣವೋ ಅಲ್ಪಪ್ರಾಣವೋ ಅಂತ ಕೇಳಿದ್ದು)
ಇನ್ನೇನು ಇಡೀ ತರಗತಿ ನಗೆಗಡಲಲ್ಲಿ ಮುಳುಗಬೇಕು ಅನ್ನುವಷ್ಟರಲ್ಲಿ.. ಆ ಇನ್ನೊಬ್ಬ 
"ನಂಗೆ ಸೈಜ್ ಗೊತ್ತಿಲ್ಲ..ಫ್ರೀ ಸೈಜ್ ಕೊಡು" ಅಂದ..
ಸೂರು ಕಿತ್ತು ಹೋಗುವ ಹಾಗೆ ಎಲ್ಲರೂ ನಗ್ತಾ ಇದ್ವಿ.. ಹುಡುಗರೂ ಹುಡುಗೀರು ಎಲ್ಲ..
ನಮ್ಮ ಮಿಸ್ಸಿಗೆ ಏನಾಯ್ತು ಅಂತ ಗೊತ್ತೇ ಆಗ್ಲಿಲ್ಲ ಪಾಪ..
ಏನಾಯ್ತು ಅಂತ ನಿಲ್ಲಿಸಿ ಕೇಳಿದರು. ಪಾಪ ಯಾರು ತಾನೇ ಏನು ಹೇಳಕ್ಕಾಗ್ತಿತ್ತು?
ಅದರೂ ಚತುರ್ಮುಖ ಬ್ರಹ್ಮನಿಗೆ ಈ ಗತಿ ಬರಬಾರದಿತ್ತು ಅಲ್ವೇ?