ಸಾತೋಡಿ ಜಲಪಾತ ನೋಡಿದ ಮೇಲೆ ಅನ್ನಿಸಿದ್ದು - "ಮಳೆಗಾಲ ಇಷ್ಟೇ ಸೈ ಏನು?"
ಏಕೆಂದರೆ, ನಾನು ಇಲ್ಲಿಗೆ ಮೊದಲೊಮ್ಮೆ ಬಂದಿದ್ದಾಗ ಅಗಾಧ ಪ್ರಮಾಣದ ನೀರಿತ್ತು.. ಈಗ ಏಕೋ ಕೊಂಚ ಸೊರಗಿದ ಹಾಗೆನಿಸಿತು.. ಸಾಗುವ ದಾರಿಯಲ್ಲಿ ಚಿರತೆ ಮರಿಯ ದರ್ಶನ ನಮಗೆ ರೋಮಾಂಚನ ತಂದಿತು.. ಸಾಗುವ ದಾರಿಯ ಎಡಬದಿಯಲ್ಲಿ ಹರಡಿಕೊಂಡಿರುವ ಕೊಡಸಳ್ಳಿ ಜಲಾಶಯದ ಹಿನ್ನೀರು 'ಮಾನಸ ಸರೋವರ'ದ ನೆನಪು ತಂದಿತು.
ಮಾಗೋಡು ಜಲಪಾತ ಮತ್ತು ಅದರ ರುದ್ರ ಕಣಿವೆ ಮೈ ಝುಮ್ಮೆನ್ನುವಂತೆ ಮಾಡಿತು .. ಮೋಡ ಕವಿದಿತ್ತಾದ್ದರಿಂದ ಜೇನುಕಲ್ಲು ಗುಡ್ಡದ ಸೂರ್ಯಾಸ್ತ ಕೊಂಚ ನಿರಾಸೆಯುಂಟು ಮಾಡಿತು.. ಅದರೂ, ಆ ನಿಸರ್ಗದ ಮಡಿಲಿನಲ್ಲಿ ನಮ್ಮನ್ನೇ ನಾವು ಮರೆತಿದ್ದೆವು!
ಸಾತೋಡಿ ಹಾಗೂ ಮಾಗೋಡು, ಎರಡನ್ನೂ ಒಂದೇ ದಿನ ಮುಗಿಸಿದೆವು. ಮಾರನೆಯ ದಿನಕ್ಕೆ ನಾನು ಕಾತರದಿಂದ ಕಾಯುತ್ತಿದ್ದೆ. ಯಾಕಂದ್ರೆ, ಆವತ್ತು ಉಂಚಳ್ಳಿ ಜಲಪಾತ ನೋಡೋದಕ್ಕೆ ಹೋಗುತ್ತಿದ್ದೆವು! ವೈಯಕ್ತಿಕವಾಗಿ ನನಗೆ ಅತಿ ಹೆಚ್ಚು ಇಷ್ಟವಾಗುವ ಜಲಪಾತ
ಅಂದ್ರೆ ಉಂಚಳ್ಳಿ (ಕೆಪ್ಪ ಜೋಗ). ಹಿಂದಿನ ರಾತ್ರಿ ಹೊಡೆದ ಹುಚ್ಚು ಕುಂಭದ್ರೋಣ ಮಳೆಗೆ ನೀರು ಹೆಚ್ಚಾಗಿ, ಜಲಪಾತ ಕಣ್ಣಿಗೆ ಕಾಣದೆ ಇರುವಷ್ಟು ನೀರಿನ ಎರಚಲು ಮತ್ತು ಮಂಜು ಮುಸುಕಿಬಿಟ್ಟಿತ್ತು. ಆಗೊಮ್ಮೆ ಈಗೊಮ್ಮೆ ದರ್ಶನಭಾಗ್ಯ ದೊರೆಯಿತು. ಸ್ವರ್ಗದ ಬಾಗಿಲಿನಲ್ಲಿ ನಿಂತ ಹಾಗಿತ್ತು ನನ್ನ ಸ್ಥಿತಿ.. ಏನು ರಭಸ, ಏನು ಪ್ರಮಾಣ, ಏನು ನಯನ ಮನೋಹರ! ನಂತರ ಬನವಾಸಿಯನ್ನು ಕಂಡು 'ಈ ನಾಡಿನಲ್ಲಿ ಹುಟ್ಟಿರೋದು ನಮ್ಮ ಪುಣ್ಯ' ಅಂತ ಮಾತಾಡಿಕೊಳ್ತ ವಾಪಸ್ಸು ಬಂದೆವು!
ನನ್ನ ಮಲೆನಾಡಿನ ಜೀವನದ ಕನಸಿಗೆ ಇಂಬು ಕೊಟ್ಟ ಈ ಟ್ರಿಪ್ ಅನ್ನು ಮರೆಯಲಾಗುವುದಿಲ್ಲ!