Thursday, April 28, 2011

ಪ್ರೀತಿ ಫಸಲ ಕಟಾವು!

ಪ್ರೀತಿ ಸೋತ ವ್ಯಕ್ತಿಯೊಬ್ಬನ(ನಾನಲ್ಲ) ತೊಳಲಾಟಗಳೇ ಈ ಸಾಲುಗಳಿಗೆ ಇಂಬು ಕೊಟ್ಟವು.. ಕಡೆಯ ಚರಣ ಕೊಂಚ ತೀವ್ರತೆಯಲ್ಲಿ ಹೆಚ್ಚು ಕಮ್ಮಿ ಆಗಿರ್ಬಹುದು. ಅತಿಶಯ ಮಾಡಲಿಕ್ಕೆ ಇಷ್ಟವಾಗ್ಲಿಲ್ಲ. ಹಾಗಾಗಿ ಏನಾಗಿತ್ತು ಅನ್ನೋದು ಸೂಚ್ಯವಾಗಿದೆ.



ಮನದ ಅಂತರಾಳವದು
ಅದರ ಬಯಲಲಿ ಅವಿತು ಕೂತು
ಆ ಬಯಲ ಸಿರಿಹೊನಲ ಮಾಡಿದಾಕೆ..
ಸವಿಮಾತ ಬೀಜ ಸುರಿದು
ಬಿಸಿಮುತ್ತ ಮಳೆಗರೆದು
ಪ್ರೀತಿಯ ಸಿರಿಮೊಳಕೆಯೊಡೆಸಿದಾಕೆ..

ಸುರಿಸುರಿವ ಆ ಮಳೆಗೆ
ಹಸಿರ್ಹಸಿರು ಮೇಲೇಳೆ
ಬಳುಕಿ ಸೊಗಪಡುವೆ ನಿನ್ನುಸಿರ ತಂಗಾಳಿಗೆ!
ತೆರೆ ಸರಿಯೆ ಸುಡು ಬಿಸಿಲು 
ನಡು ರಾತ್ರಿ ಬಿರು ಹಗಲು
ಸವಿಜೇನ ಹೊನಲಹುದು ನಿನ್ಹೆಸರು ನನ ಬಾಳಿಗೆ.

ತೆನೆಹೊತ್ತು ಬೀಗುತಿಹ  
ನನ್ನೊಲವ ಪ್ರೀತಿಯಿದು
ಕಂಡಿತದಾವ ರೀತಿ ನಿನ ಕಂಗಳಿಗೆ?
ತುಂಬಿದೊಡಲ ತ್ಯಾಗವಿದು
ಹಸಿಯಿದ್ದೂ ಹುಸಿಯಾಗದು
ಅದೇತಕಾಸೆಯಾಯಿತೊ ಅನ್ಯರನ್ನದಗುಳಿಗೆ?