ಉದಯಿಸದರುಣನ ಕಿರಣಗಳು
ಜಲಜಳ ಹೂವೆಸಳರಳಿಸಲು..
ಧರೆ ಹಸುರಿನ ಬಸಿರನು ಹೊದ್ದಿರದೆ
ತುಷಾರನ ತೃಷೆಯದು ತೀರಿಹುದು!
ಕಾಣದ ಕನಸಿನ ಕಿನ್ನರಿಯು-
ಆಡದೆ ಉದುರಿದ ಮುತ್ತುಗಳ..
ಮನ ಅರಿವೇ ಇಲ್ಲದೆ ಹೆಕ್ಕಿಹುದು!
ಮಾಸಿದ ಹರಕಲು ಅಂಗಿಯೊಳು,
ಬೆಚ್ಚನೆ ಬಚ್ಚಿಡುವಾತುರದಿ-
ತನ್ನನೆ ತಾ ಮೈ ಮರೆತಿಹುದು!
ನೋಟದ ಬಾಣವು ನಾಟದೆಯೇ
ಒಲುಮೆಯ ನೆತ್ತರು ಉಕ್ಕಿರಲು..
ಹಗುರ ನಗೆಯೊಂದು ನೆಗೆದಿರಲು
ಆಗದ ಗಾಯವು ಮಾಗಿಹುದು!
ಚಿಂತೆಯ ಚಿಂತೆಯಿಂದೇತಕದು
ಚಿತೆಯೇರುವತನs ಬೆಂಬಿಡದು ಅದು!ಬಲ್ಲದ ಭವಿತದ ಲೋಭದಲಿ
ಇಂದಿನ ಕನಸನು ಕೆಡಿಸುವುದೇ?
ಜೀವನ ಪಯಣದ ಹಾದಿಯಲಿ
ಸೊನ್ನೆಯೆಲ್ಲವೂ ಕನಸಾಸ್ವಾದಿಸದೇ!