ಮನಸ್ಸಿನ ಮೂಲೇಲಿ ಈ ಪ್ರಶ್ನೆ ಎದ್ದಿತು! ಇದ್ದಕ್ಕಿದ್ದಂತೆ. "ಭಿಕ್ಷುಕರು" ಯಾಕೆ "ಭಿಕ್ಷುಕರು" ಅಂತ! ಅವರಲ್ಲಿ ಹಣದ ಕೊರತೆಯೋ ಅಥವಾ ಶ್ರೀಮಂತರಲ್ಲಿ ಮಾನವೀಯತೆಯ ಕೊರತೆಯೋ! ಅವರಲ್ಲಿ ದುಡಿಯುವ ಚೈತನ್ಯವಿಲ್ಲವೋ ಅಥವಾ ಅವರಿಗೆ ಕೆಲಸ ಕೊಡುವ ಉದಾರ ಮನೋಭಾವ ಇತರರಿಗಿಲ್ಲವೋ?
ಹುಟ್ಟು ಹಬ್ಬಗಳಂದು ಹತ್ತಾರು ದೀಪಗಳನ್ನು ಊದಿ ಆಚರಿಸುವ ಮಂದಿಗೆ, ಅವೇ ಆ ಹತ್ತು ದೀಪಗಳು ಇತರ ಹತ್ತು ಮನೆಗಳಿಗೆ ಬೆಳಕು ನೀಡಬಲ್ಲವು ಎಂಬುದು ಏಕೆ ಹೊಳೆಯುವುದಿಲ್ಲ? ವಿಶ್ವಮಾನವರಾಗಿ ಹುಟ್ಟುವ ಎಲ್ಲ ಮಕ್ಕಳನ್ನೂ ಯಾಕೆ ಸಂಕುಚಿತರನ್ನಾಗಿ ಮಾಡಲಾಗುತ್ತಿದೆ? ಜಾತಿ ನಮೂದಿಸದಿದ್ದರೆ ಶಾಲೆಗೆ ಪ್ರವೇಶಾತಿ ಕ್ಲಿಷ್ಟ! ಹ್ಹ.. ಏನಾದವು ರಾಮರಾಜ್ಯ , ವಿಶ್ವಮಾನವ ಸಂದೇಶಗಳು? ಆ ಕನಸು ಕಂಡವರು ಮೋಜಿಗಾಗಿ ಕನಸು ಕಂಡರೆ? ಅಥವಾ ಎಲ್ಲರೂ ಅವರನ್ನೇ ಮೋಜಿನ "ವಸ್ತು"ಗಳನ್ನಾಗಿ ಕಾಣುತ್ತಿರುವರೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕೆಂದರೆ ಮೆದುಳಿಗೆ ಹುಳು ಬಿಟ್ಟ ಹಾಗೆಯೇ ಸೈ.
ಏನ ಮಾಡ ಬಂದವರು ಏನ ಮಾಡ ಹೊರಟಿಹೆವು ನಾವು? ಅಲ್ಲಿ ಮಂದಿರ ಕಟ್ಟಿದರೆ ಇಲ್ಲಿ ಮಸೀದಿ! ನಮಗಿಂತ ಆ ಹಕ್ಕಿಗಳೇ ವಾಸಿ.. ಬೇಕೆಂದಾಗ ಮಸೀದಿ, ಬೇಸರಿಸಿದಾಗ ಮಂದಿರ. ಇದರಿಂದ ನಾವು ಕಲಿಯುವುದು ಏನೋ ಇದೆಯಲ್ಲವೇ? ಮಾನವ ಜನ್ಮ ದೊಡ್ಡದು..ಇಹಕಾಗಿ ಬಾಳದಿರಿ, ಹುಚ್ಚಪ್ಪಗಳಿರಾ..
ನಾನು ಬಿಟ್ಟುಕೊಂಡಿರೋ ಹುಳುವನ್ನು ತೆಗೆಯೋ ಪ್ರಯತ್ನ ಮಾಡ್ತಿದೀನಿ. ದಯವಿಟ್ಟು ಒಮ್ಮೆ ತಾವೂ ಈ ಹುಳುವನ್ನು ನಿಮ್ಮ ತಲೆಯೊಳಗೂ ಹಾಕ್ಕೊಳ್ಳಿ. ಉತ್ತರ ಗೊತ್ತಾದ ಮೇಲೆ ತೆಗೆದುಬಿಡಿ.ಉತ್ತರ ಸಿಕ್ಕರೆ ಹಂಚಿಕೊಳ್ಳಿ...
ಬರುವೆ ಮತ್ತೊಮ್ಮೆ!