Saturday, January 30, 2010

ಬಾಲ ವಿಧವೆಯ ಮನದ ಮಜಲುಗಳು

ಮರದ ಮೇಲೆ, ಮರಳ ಗೂಡೊಳಗೆ
ಕುಣಿ ಕುಣಿದು, ದಣಿ ದಣಿದು
ಕಾಲು ನೋಯುವ ಮುನ್ನವೇ,
ಭಾರವಾಯಿತೆನ್ನ ಕುತ್ತಿಗೆ!

ಅಂಬುಧಿಯಾಚೆಗಿನ ಕನಸು,
ಹೊಸ್ತಿಲನ್ನೂ ದಾಟಬಿಡದ ವಾಸ್ತವ!
ನನ್ನ ಕನಸುಗಳ ನಾಶಗೈದ
ವಾಸ್ತವವ ಕ್ಷಮಿಸುವುಸು ಹೇಗೆ?

ಮಧುರಾರ್ಣವದೊಳು ಮಿಂದೆದ್ದ ಮನುಷ್ಯ
ತಾ ಮಧುಮೇಹಿಯಾಗುವನೇ?
ನಿನ್ನಿಷ್ಟದಂತೆ ನಡೆದ ನನಗೆ
ಮಾಯಾಂಗನೆಯ ಪಟ್ಟವೇಕೆ?

ನಿನ್ನ ಬಾಳ ಯಾಗಕ್ಕೆ
ನನ್ನ ಕನಸುಗಳನ್ನೇ ಸಮಿತ್ತುಗಳ ಮಾಡಿದ್ದೆ!
ನಿನ್ನ ಶೃತಿಗೆ ಹಿರಿ ಹಿರಿ ಹಿಗ್ಗಿದ್ದ ನನ್ನನ್ನು
ಕುಗ್ಗಿಸಿ ಹೋದದ್ದು ತರವೇ?

ಈಗ ನನ್ನ ಖಾಲಿ ಹಣೆ, ಹೂ ಕಾಣದ ಮುಡಿಯ ಕಂಡು
ಮರುಗುವರು ಮಂದಿ..
ಆಗೆಲ್ಲಿ ಹೋಗಿತ್ತು ಅವರ ಬುದ್ಧಿ??
ಆದರೂ, ಅಷ್ಟಾದರೂ..
ನನ್ನ- ನಿನ್ನ ಬೆಸುಗೆಯ ಬಲ್ಲರೇನವರು?

Monday, January 18, 2010

ನೆರಳು, ಪಾಠ ಎರಡೂ ಇಲ್ಲ

ಜನವರಿ ೧೮, ೨೦೧೦ ಎಂಬಲ್ಲಿಗೆ ಕರಗನಹಳ್ಳಿ ಸುಬ್ಬರಾವ್ ಅಶ್ವತ್ಥನಾರಾಯಣ  ಹೆಸರಿನ "ಸಾಮಾನ್ಯ ಮನುಷ್ಯ" ಒಬ್ಬರು ಇಹಲೋಕ ತ್ಯಜಿಸಿದರು. ಹೌದು, ಅವರನ್ನು ಕಣ್ಣಾರೆ ಕಂಡವರು ಹೇಳುವ ಮಾತು  - "ಅವರು ಎಲ್ಲರಂತೆ ಸಾಮಾನ್ಯ ಮನುಷ್ಯರಾಗಿದ್ದರು." ಮೈಸೂರಿನ, ಸರಸ್ವತಿಪುರಂ ನಾಲ್ಕನೇ ಮುಖ್ಯ ರಸ್ತೆಯ ಮನೆ "ಕಲಾಶ್ರೀ". ಬಾಗಿಲು ತೆಗೆದಿದ್ದರೆ ಅದರ ಮೂಲಕ ನಮಗೆ ಕಾಣುತ್ತಿದ್ದುದೆ ಅವರು! ಸಿಂಹನಂತೆ ಗತ್ತಿನಿಂದ ಕುಳಿತಿರುತ್ತಿದ್ದರು. ಸಂಜೆ ಐದು -ಐದೂ ಒರೆಯ ಹೊತ್ತಿಗೆ ಸರಸ್ವತಿಪುರಂನ ಜವರೇಗೌಡ ಉದ್ಯಾನವನ ಅವರ ಸ್ಥಳ! ಪ್ರತಿನಿತ್ಯ ಕಚೇರಿಗೆ ಹೋಗುವವರಿಗಿಂತಲೂ ಹೆಚ್ಚಿನ ಸಮಯಪ್ರಜ್ಞೆ ಮತ್ತು ಡ್ರೆಸ್ಸಿಂಗ್ ಸೆನ್ಸ್. ತಲೆಯೆತ್ತಿ ನಡೆಯುವ ಆ ಭಂಗಿಯನ್ನು ನೋಡುವುದೇ ನಮಗೆಲ್ಲ ಒಂದು ರೀತಿ ಕುತೂಹಲ. ಕೈಯಲ್ಲಿ ಒಂದು ಕೋಲು. "ನಮಸ್ಕಾರ ಅಶ್ವತ್ಥ್ ಅವರೇ " ಎಂದವರಿಗೆ "ನಮಸ್ಕಾರ ನಮಸ್ಕಾರ" ಎಂಬ ಮಂದಹಾಸ ಕೂಡಿದ ಉತ್ತರ.


ದೇವರಿಗೆ ಒಳ್ಳೆಯವರನ್ನು ಕಂಡರೆ ಇಷ್ಟ ಎನ್ನುವ ಮಾತು ಮತ್ತೊಮ್ಮೆ ಸಾಬೀತಾಗಿದೆ. ಎಲ್ಲರೊಳಗೆ ಒಬ್ಬರಾಗಿದ್ದ, ಚಿತ್ರರಂಗವೇ ತಮ್ಮ ಮನೆ ಎಂದುಕೊಂಡಿದ್ದ ನಿಷ್ಠಾವಂತ, ಸಹೃದಯಿ ಮತ್ತು ಸಾಮಾನ್ಯ ಮನುಷ್ಯರೊಬ್ಬರನ್ನು ಕಳೆದುಕೊಂಡಿದ್ದೇವೆ. ದುಃಖ ಪಡುವುದರ ಬದಲಾಗಿ ಹೆಮ್ಮೆ ಪಡೋಣ. ಅವರಂತೆ ಎಲ್ಲರೂ ಒಳ್ಳೆಯವರಗಲಿ ಎಂದು ಆಶಿಸೋಣ. ಅಶ್ವತ್ಥ ವೃಕ್ಷದ ನೆರಳೂ ಇಲ್ಲ, ಚಾಮಯ್ಯ ಮೇಷ್ಟ್ರ ಪಾಠವೂ ಇನ್ನು ಮುಂದೆ ಇರೋದಿಲ್ಲ. ಹಿಂದಿನದನ್ನೇ ರಿವೈಂಡ್ ಮಾಡಿ ನೋಡ್ಕೊತಿರ್ಬೇಕು. ನಮ್ಮ ಚಿತ್ರ ರಂಗ, 'ರಮ್ಯ'ವಾಗಿರುವ ಅಸಹ್ಯಗಳನ್ನು ಬದಿಗೊತ್ತಿ ನಿಜವಾದ ಪ್ರತಿಭೆಗಳೆಡೆಗೆ ಗಮನ ಹರಿಸಲಿ. ಅಟ್ ಲೀಸ್ಟ್, ಇಂಥವರ ಬಗ್ಗೆ ಒಮ್ಮೆಯಾದರೂ ಯೋಚನೆ ಮಾಡಲಿ. ಹಾಗೆ ಮಾಡುತ್ತಾರೆಂದು ಆಶಿಸುತ್ತ..

ಮತ್ತೆ ಬರುವೆ.

Sunday, January 17, 2010

ಹೀಗೊಂದು ಕತೆ!

**ಅರ್ಣವ  = ಸಮುದ್ರ
ವಾಹಿನಿ = ನದಿ
ತರಂಗಿಣಿ = ಸರೋವರ


ಕಂಬಳಿಯ ಕಿಂಡಿಯೊಳಗಿಂದ ನೇಸರ ನಗೆಯಾಡುತ್ತಿದ್ದ. ಅವಮಾನವಾದಂತಾಯಿತು. ನಾ ಮಾಡಿದ ತಪ್ಪೇನು? ಬಹುಶಃ ಹೊತ್ತು ನೆತ್ತಿಗೇರಿತ್ತೋ ಏನೋ?
"ಲೋ ಅರ್ಣವಾ ಎದ್ದೇಳೋ ಮೇಲೆ..ಹೊತ್ತಾಗುತ್ತೆ.."
ಅಮ್ಮನ ಚೀರಾಟಕ್ಕೆ ಎಚ್ಚರವಾಗಿ ಎದ್ದು ಕುಳಿತಾಗ ಬರೋಬ್ಬರಿ ಪೂರ್ವಾಹ್ನದ ೧೦ ಗಂಟೆ.
"ಇನ್ ಮುಂದೆ ಈ ಥರ ಆದ್ರೆ ಬಲೆ ಕಷ್ಟ, ಸ್ವಲ್ಪ ತಿದ್ಕೋ ಮಗನೆ" - ಹಿತನುಡಿಗಳು.
ಏನೂ ಕೇಳಿಸದವನಂತೆ ಹೋಗಿ ನಿತ್ಯ ಕರ್ಮಗಳನ್ನೆಲ್ಲ ಮುಗಿಸಿ ಬಂದು "ಕಾಫಿ.." ಕೂಗಿದೆ. ಕೋಣೆಗೆ ಹೋಗಿ ಬಟ್ಟೆ ಬದಲಾಯಿಸಿ ಟೇಪು ರೆಕಾರ್ಡರಿನಲ್ಲಿ ಹಾಡು ಕೇಳುತ್ತ ಕೂತೆ. " ಇವಳು ಯಾರು ಬಲ್ಲೆಯೇನು..ಇವಳ ಹೆಸರ ಹೇಳಲೇನು.." ಇಂಪಾದ ಹಾಡು. " ಅಣ್ಣಾ ಕಾಫೀ.." ಕೂಗುತ್ತ ಬಂದಳು ಶಾಲ್ಮಲೀ. ಅತ್ತ ಹಾಡಿನ ಕಡೆ ಗಮನ ಹೊಗಿಯೇಬಿಟ್ಟಿತು.
ನಾನು ಅರ್ಣವ್. ತಂಗಿ ಶಾಲ್ಮಲೀ. ಅಪ್ಪ ಚಂದ್ರೇಗೌಡ. ಅಮ್ಮ ವಿಜಯಮ್ಮ. ನಾಲ್ಕು ಮಂದಿಯ ಸುಖ ಸಂಸಾರ. ಊರು ಸಕಲೇಶಪುರದ ಬಳಿಯ ಮಲೆನಾಡ ಹಳ್ಳಿ. ಮೂರು ಮತ್ತೊಂದು ಮನೆಗಳು. ಪ್ರತಿಯೊಬ್ಬರಿಗೂ ಎಲ್ಲರೂ ಗೊತ್ತು. ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ನನ್ನ ನೌಕರಿ. ಜೀವನಕ್ಕಾಗುವಷ್ಟು ಕಾಫಿ ತೋಟ ಮತ್ತು ಕಂಗು. ಇನ್ನೇನೂ ಬೇಡವೆನಿಸುವಷ್ಟು ನಿರ್ಲಿಪ್ತತೆ. ತೃಪ್ತಿ. ನಾನು ಮೌನಿ. ತಂಗಿ ನನ್ನ ಮಾತೂ ಸೇರಿಸಿ ಆಡುತ್ತಿದ್ದಳು. ಮನೆಯವರಿಗೆಲ್ಲ ಮುದ್ದು..ಕುಟುಂಬದ ಮೊದಲ ಹೆಣ್ಣು ಕೂಸು ಎಂದು. ನನಗೂ ಕೂಡ.
ನೌಕರಿಗೆ ಸೇರಿ ಈಗ್ಗೆ ೨ ವರ್ಷಗಳಾಗಿದ್ದವು. ಇಲ್ಲಿಯವರೆಗೆ ನಾನು ಏನನ್ನೂ ಬಯಸಿಯೇ ಇಲ್ಲ. ಎಲ್ಲ ತಂತಾನೇ ಆಗುತ್ತಿದ್ದವು. ಮನೆಯ ಜ್ಯೇಷ್ಠ ಪುತ್ರ. ಹೆತ್ತವರ ಮನದೊಳಗೆ ಮೊಮ್ಮಗುವಾಡಿಸುವ ಬಯಕೆ. ನಾ ತಾನೇ ಹರಕೆಯ ಕುರಿ ಅದಕ್ಕೆ.. ಸರಿ ಒಪ್ಪಿದೆ. ಮನಸ್ಸಿಗೆ ಕೊಂಚ ಕಷ್ಟವಾಗತೊಡಗಿತು. "ಸಂಸಾರ, ಮಕ್ಕಳು, ಹೆಂಡತಿ, ಜವಾಬ್ದಾರಿ..ಯಾಕೆ ಬೇಕು ಇವೆಲ್ಲ?"
ಮರುಕ್ಷಣ ಅಪ್ಪ-ಅಮ್ಮಂದಿರ ಚಿತ್ರಣ. ಇದುವರೆಗೂ ನನಗಾಗಿ ಬದುಕಿದವನಲ್ಲ. ಈಗಲೂ ಹಾಗೆಯೆ ಅಂದುಕೊಂಡರಾಯಿತು. ಸಮಸ್ಯೆಗೆ ನಾನೇ ಕಂಡುಕೊಂಡ ಪರಿಹಾರ.
ಪತ್ರ ಬಂದಿತು..ಹಳ್ಳಿಯಲ್ಲಿ ಫೋನ್ ಇಲ್ಲವಾದ್ದರಿಂದ ಪತ್ರ. 
" ಕ್ಷೇಮ.
ನೀನೂ ಕ್ಷೇಮವಷ್ಟೇ. ನಮಗೆ ಸೊಸೆಯನ್ನು ನೋಡಲು ಹೋಗುತ್ತಿದ್ದೇವೆ. ನಿನ್ನ ಅಮ್ಮನೂ ಕೆಲಸಗಳನ್ನು ಮಾಡಿ ದಣಿಯುತ್ತಿರುತ್ತಾಳೆ . ಅವಳಿಗೂ ಸಹಾಯವಾದಂತಾಗುತ್ತದೆ. ಕುಶಾಲನಗರದ ಬಳಿಯ ಕಟ್ಟೆಪುರದವರು. ಸ್ಥಿತಿವಂತರು. ನಮ್ಮ ಅಂತಸ್ತಿಗೆ ಸರಿ ಹೊಂದುವರು. ನಿನ್ನ ಆಕ್ಷೇಪವಿಲ್ಲವೆಂದು ಬಲ್ಲೆವು. ಮತ್ತೆ ಪತ್ರ ಬರೆಯುವೆ."
ದಿಗಿಲಾಯಿತು. "ಅಮ್ಮನಿಗೆ ಕೆಲಸ ಕಡಿಮೆ ಮಾಡಲು ನಾ ಮದುವೆಯಾಗಬೇಕೋ ಅಥವಾ.. " ಏನೂ ತೋಚಲಿಲ್ಲ. "ನಾ ಸ್ವಾರ್ಥಿಯಗುತ್ತಿದ್ದೇನೋ, ಅಥವಾ ಅಪ್ಪನೋ?" ಛೆ..ಎಂಥ ಸಂದಿಗ್ಧ! ಅಪ್ಪನಿಗೆ ಎದುರಾಡುವ ಹಾಗಿರಲಿಲ್ಲವೆಂದೇನಲ್ಲ, ಆದರೆ ರೂಢಿಯಿಲ್ಲ. ಅವುಡುಗಚ್ಚಿಕೊಂಡು ಸುಮ್ಮನಾದೆ. ಒಳಗೊಳಗೇ ರೆಕ್ಕೆ ಕತ್ತರಿಸಿದ ಹಕ್ಕಿಯ ಯಾತನೆ. "ನನ್ನ ವ್ಯಕ್ತಿತ್ವಕ್ಕೆ ಬೆಲೆಯೇ ಇಲ್ಲವೇ?" ಅವಮಾನದ ಪ್ರಶ್ನೆ, ಮನದೊಳಗೆ.
ಕೊನೆಗೂ ಅವರ ಬಯಕೆ ತೀರುವ ಕಾಲ ಬಂದೇ ಬಂತು. ಊರಿಗೆ ಬುಲಾವ್. ನಿಶ್ಚಿತಾರ್ಥವೂ ಗೊತ್ತಾಗಿತ್ತು. ಬರುವ ಸೋಮವಾರ.. ಅಂದರೆ ಇನ್ನು ೫ ದಿನ ಬಾಕಿ ಅಷ್ಟೇ. ಮನಸ್ಸಿಲ್ಲದ ಮನಸ್ಸಿನಿಂದ ಬೆಳಿಗ್ಗೆ ೬.೩೦ರ ಮೈಸೂರು-ಕೊಣನೂರು-ಸಕಲೇಶಪುರದ ಬಸ್ಸು ಹತ್ತಿ ಕಿಟಿಕಿಯ ಸೀಟು ಹಿಡಿದು ಕುಳಿತೆ. ತಲೆಯೊಳಗೆ ಯೋಚನೆ. ಮನದೊಳಗೆ ಯಾತನೆ. ಯಾರ ಬಳಿ ಹೇಳಿಕೊಳ್ಳುವುದು?
"ಮಗೂ, ಅದು ಹಿರಿಯ ನಾಗರಿಕರ ಸೀಟು..ಸ್ವಲ್ಪ ಏಳ್ತೀಯ ಮೇಲೆ?" ಒಬ್ಬ ವೃದ್ಧರ ಧ್ವನಿ. ಅದಕ್ಕೆ ಒತ್ತಾಗುವಂತೆ ಬಸ್ಸಿನಲ್ಲಿದ್ದವರ ಮುಸಿ ಮುಸಿ ನಗು. ಮತ್ತೆ ಅವಮಾನ! ನಾ ತಿಳಿಯದೆ ಮಾಡದ ತಪ್ಪಿಗೆ. ಕ್ಷಮಿಸಿ ಎನ್ನುತ್ತಾ ಬೇರೆ ಕಡೆ ಕೂತೆ. ಮನೆ ಸೇರಿ ಹೆಚ್ಚು ಮೌನಿಯಾಗಿ ನನ್ನನ್ನೇ ನಾನು ಬಿಂಬಿಸಿಕೊಳ್ಳುತ್ತ ಎಷ್ಟು ಬೇಕೋ ಅಷ್ಟನ್ನೇ ಮಾತಾಡುತ್ತ ಒಂದು ದಿನವನ್ನು ಕಷ್ಟ ಪಟ್ಟು ನೂಕಿದೆ.
ಕಾಫಿ ತಣ್ಣಗಾಗುತ್ತಿದೆ ಅನ್ನಿಸಿತು. ಎತ್ತಿ ಹೀರಿಬಿಟ್ಟೆ. ಗಷ್ಟದ ಸಮೇತ. ಆಗಲೇ ಹೊಳೆದದ್ದು ನಾ ಎಲ್ಲೋ ಕಳೆದು ಹೋಗಿದ್ದೆ ಎಂದು. ಏನು ಮಾಡಲೂ ತೋಚದೆ ತೋಟಕ್ಕಾದರೂ ಹೋಗಿ ಬರೋಣ ಎಂದು ಹೊರಟೆ. " ಲೋ ಅರ್ಣವಾ, ಸೀರೆ ಬಟ್ಟೆ ಎಲ್ಲ ತರಬೇಕು. ಎಲ್ಲೂ ಹೋಗಬೇಡ. ಹುಡುಕೋಕೆ ಆಗಲ್ಲ ಆಮೇಲೆ..ಆಳು ಮಂದಿ ಬೇರೆ ಇಲ್ಲ" ಅಮ್ಮನ ಚೀರಾಟ. "ಇಲ್ಲೇ ತೋಟಕ್ ಹೋಗಿ ಬರ್ತೇನೆ. ಸ್ವಲ್ಪ ಹೊತ್ತು ಅಷ್ಟೇ." ಮುಂದಿನದು ಹೆಜ್ಜೆಯ ಸಪ್ಪಳಗಳೇ.
ಸಪ್ಪಗೆ ಬೇಸರದ ಛಾಯೆ ಎದ್ದು ತೋರುವಂತಿತ್ತು ಮುಖ. ಮಳೆ ಆಗಷ್ಟೇ ನಿಂತಿತ್ತು...ಬಾಯಾರಿದ್ದ ಭೂಮಿಯನ್ನು ಸಾವರಿಸುವಂತೆ. ಗಿಡ ಮರಗಳ ಎಳೆಗಳು ನೀರ ಹನಿಗಳೊಂದಿಗೆ ನಗುತ್ತಿದ್ದವು. ಮತ್ತೆ ಅವಮಾನ. ಎಲ್ಲವೂ ನಗುತ್ತಿರುವಾಗ ನಾ ಯಾಕೆ ಹೀಗೆ ಎಂಬ ಅಂಶ ನನಗೂ ಹೊಳೆಯಿತು. ಆದರೆ ನಾನು ಅಸಹಾಯಕ. ಈ ಅಸಹಾಯಕತನ, ಕಡಿಮೆ ಮಾತು, ಕೊನೆಗೆ ಈ ಮದುವೆ ನಿರ್ಣಯ., ಎಲ್ಲ ಸೇರಿ ನನ್ನನ್ನು ಇನ್ನಷ್ಟು ಕೆಳಕ್ಕೆ ನೂಕಿದ್ದವು.
ನಮ್ಮ ತೋಟಕ್ಕೂ, ಹಿರೆಮನೆ ಅಪ್ಪಣ್ಣಯ್ಯನವರ ತೋಟಕ್ಕೂ ನಡುವೆ ಸಣ್ಣ ಝರಿ. ಮಳೆಗಾಲ ಬೇರೆ.. ಶೃತಿಗೆ ತಕ್ಕಂತೆ ನರ್ತಿಸುತ್ತಾ ಹರಿಯುತ್ತಿತ್ತು. ಇಲ್ಲೇ ಸ್ವಲ್ಪ ಹೊತ್ತು ಕೂರೋಣ ಎಂದು ಒಂದು ಹಾಸು ಬಂಡೆಯನ್ನು ಹುಡುಕಿ ಕೂತೆ. ಅದೇ ಮಾಮೂಲಿನಂತೆ ಯೋಚನಾಮಗ್ನನಾದೆ. ಒಂದೆರಡು ನಿಮಿಷಗಳ ಅಂತರದಲ್ಲಿ ಹೆಂಗಸರ ನಗು ಕೇಳಿತು. ಅಲ್ಲಿ ಇಲ್ಲಿ ನೋಡಿದೆ.. ಝರಿಯ ಆ ಬದಿಯಲ್ಲಿ ೫ ಹೆಂಗಸರ ಗುಂಪು.  ಅದರಲ್ಲಿ ಇಬ್ಬರು ನನ್ನನ್ನೇ ನೋಡಿ ನಗುತ್ತಿರುವುದು ಎಂದು ಅನ್ನಿಸಿತು. ಯಾಕೆ ಅಂತ ಗೊತ್ತಾಗಲಿಲ್ಲ. ಆಮೇಲೆ ಗೊತ್ತಾಯಿತು, ನನ್ನ ಚಪ್ಪಲಿ ನನಗೆ ಅರಿವಿಲ್ಲದಂತೆಯೇ ಜಾರಿ ನೀರಿಗೆ ಬಿದ್ದದ್ದನ್ನು ಅವರು ಗಮನಿಸಿದ್ದರು ಅಂತ. ಅವಮಾನವಾದಂತಾಗಿ ಎದ್ದು ಬಂದುಬಿಟ್ಟೆ. "ನನ್ನ ಚಪ್ಪಲಿ ನಾನು ಕಳಕೊಂಡ್ರೆ ಅವರಿಗೇನು ನಷ್ಟ?" ಎಂಬ ಭಂಡ ಉತ್ತರ.
ಎಷ್ಟೋ ಬಾರಿ ಈ "ಅವಮಾನ" ಎಂಬ ಪದ ಮರೀಬೇಕು ಅಂತ ಪ್ರಯತ್ನ ಪಟ್ಟಿದ್ದೀನಿ. ಕಷ್ಟ. ಬಿಟ್ಟೆ!
ಎಡಗಾಲಲ್ಲಿದ್ದ ಇನ್ನೊಂದು ಚಪ್ಪಲಿಯನ್ನೂ ಸಿಟ್ಟಿನಿಂದ ನೀರಿಗೆಸೆದು ಮೇಲೆದ್ದೆ. ನಗು ಇನ್ನೂ ಜೋರಾಯಿತು. ಭರ್ರ್ ಎಂದು ಮನೆಗೆ ಬಂದುಬಿಟ್ಟೆ. ಅಮ್ಮ, ಶಾಲ್ಮಲೀ ಅಪ್ಪ ಎಲ್ಲ ತಯಾರಾಗಿ ನನಗಾಗಿ ಕಾದು ಕುಳಿತಿದ್ದರು. ಎಲ್ಲರೂ ಹೊಸ ಜವಳಿಯ ಉತ್ಸಾಹ ಖುಷಿಯಲ್ಲಿದ್ದರು. ನಾನು ಕಳೆದುಕೊಂಡ ಚಪ್ಪಲಿ., ಅದಕ್ಕೂ ಹೆಚ್ಚಾಗಿ ಆ ಹೆಂಗಸು ಮಾಡಿದ ಅವಮಾನ- ಇದರ ಬಗ್ಗೆಯೇ ಯೋಚಿಸುತ್ತಿದ್ದೆ. ರೋಬೋಟ್ ನಂತೆ ಬಟ್ಟೆ ಬದಲಾಯಿಸಿ ಬೇರೆ ಮೆಟ್ಟು ಧರಿಸಿ ಅವರ ಜೊತೆ ಹೊರಟೆ. ಎಲ್ಲರೂ ಜವಳಿಯ ಬಣ್ಣ, ಅಂಚು ಹೀಗೆ ಏನೇನೋ ಮಾತಾಡಿ ಬರುತ್ತಿದ್ದರು. ನಾ ಮೌನಿಯಾಗಿದ್ದೆ. ಬಸ್ಸು ಹತ್ತಿ ಕೂತಾಗಲೂ ಮೌನಿ. ಕಂಡಕ್ಟರ್ ಬಂದಾಗ, "ನಾಲ್ಕು ಸಕ್ಲೇಶ್ಪುರ". ಇಷ್ಟೇ ಮಾತು. ಅಂಗಡಿಯಲ್ಲೂ ಸಹ. ಅವರು ಆರಿಸಿದ್ದಕ್ಕೆ ತಲೆ ಆಡಿಸಿದೆ. ಮದುವೆ ಹೆಣ್ಣಿಗೇ ಸುಮ್ಮನೆ ಹ್ಞೂ೦ ಅಂದವನು ಇದಕ್ಕೆ ಯಾಕೆ ತಲೆ ಕೆಡಿಸಿಕೊಳ್ಳೋದು? ತಿರುಗಿ ಬರುವುದರೊಳಗೆ ಗಂಟೆ ಐದಾಗಿತ್ತು. ನಾನು ಇಲ್ಲೇ ದೇವಸ್ಥಾನದ ಬಳಿ ಹೋಗಿ ಬರುವುದಾಗಿ ಹೇಳಿ ಮನೆಯ ದಾರಿಯಿಂದ ಈ ಕಡೆಗೆ ಬಂದೆ. ದೇವಸ್ಥಾನದ ಕಟ್ಟೆಯ ಮೇಲೆ ಸುಮ್ಮನೆ ಕೂತಿದ್ದೆ. ಇದ್ದಕ್ಕಿದ್ದಂತೆ ಏನೋ ಗದ್ದಲ. " ಲೇ ವಾಹಿನಿ..ನಿಲ್ಲೇ..ನಂದು ಕಣೆ ಆ ಗೊಂಬೆ, ಕೊಡೆ..ಅಮ್ಮ..ನೋಡು.."
ಅವಳೇ, ನನ್ನ ನೋಡಿ ಝರಿ ಬದಿಯಲ್ಲಿ ಆಡಿಕೊಳ್ಳೋ ಹಾಗೆ ನಕ್ಕವಳು. ಅವಳ ಸ್ನಿಗ್ಧ ಸೌಂದರ್ಯಕ್ಕೆ ಸ್ಥಬ್ದನಾದೆ. ಮಿಂಚಿನತಹ ಕಣ್ಣುಗಳು..ಆಹ್! ನನ್ನಲ್ಲಿ ಏನಾಗುತ್ತಿತ್ತೆಂದು ನನಗೇ ತಿಳಿಯಲಿಲ್ಲ. ಏನೇನೋ ಭಾವನೆಗಳು ರೆಕ್ಕೆ ಬಿಚ್ಚಿ ಹಾರಲಾರಂಭಿಸಿದವು. "ತಪ್ಪು ಮಾಡ್ತಾ ಇದ್ದೀಯ!" ಅಂತರಾತ್ಮದ ಕೂಗು. ಕೇಳುವ ಬೋಳೀಮಗ ಯಾರು ಎಂಬ ಧಿಮಾಕು. ಅವಳು ಮಾಡಿದ ಅವಮಾನ ಈ ಭಾವನೆಯ ಮುಂದೆ ಏನೇನೂ ಇಲ್ಲ ಎನ್ನಿಸಿಬಿಟ್ಟಿತು. ಮೊದಲ ಬಾರಿ ಈ ರೀತಿಯ ಕಾರಣವೊಂದಕ್ಕೆ ಮೈ ಜುಮ್ಮೆಂದಿದೆ! ಏನೋ ಒಂದು ರೀತಿ ಸಂತೋಷ. ಮನದ ಮೂಲೆಯಲ್ಲಿ ಸಡಗರ.. ಮನೆಗೆ ಓಡಿದೆ..
ಅಮ್ಮ ನೂಲು ಹೊಸೀತಿದ್ರು...
" ಅಮ್ಮ, ಹುಡುಗಿ ಏನ್ ಓದ್ಕೊಂಡಿದಾಳೆ?"
"ಡಿಗ್ರಿ ಮಾಡ್ಕಂಡ್ ಅವ್ಳೆ ಮಗಾ..ಈಗ ಇಲ್ಲೇ, ಗುಡ್ದದಾಚೆ ಕೊಪ್ಪದಾಗವ್ಳೆ. ಅವಳ್ ಸ್ವಾದರ್ ಮಾವನ್ ಮನೆಯಾಗೆ. ಪಕ್ಸಕ್ಕೆ ಅಂತ ಬಂದವ್ಳಂತೆ."
"ಹೆಸರು"
"ತರಂಗಿಣಿ ಅಂತೆ. ನಂಗೆ ಒಂದಿಷ್ಟೂ ಹಿಡುಸ್ನಿಲ್ಲ ಆ ಹೆಸರು. ಅದೇನು ಅಂತ ಹೆಸರು ಮಡುಗ್ತಾರೋ ಈಗಿನ್ ಕಾಲ್ದಾಗೆ!"
ಅಮ್ಮ ತುಸು ಹಳೆ ಕಾಲದವಳ  ಹಾಗೆಯೇ. ಅಪ್ಪ ಸ್ವಲ್ಪ ಫಾರ್ವರ್ಡ್. ಅಪ್ಪನೇ ನಮಗೆ ಇಷ್ಟು ಚೆಂದದ ಹೆಸರುಗಳನ್ನಿಟ್ಟಿದ್ದು. ಅಮ್ಮನ ವಿರೋಧದ ನಡುವೆಯೂ!
ಮನಸ್ಸಿನಲ್ಲೇ ಏನೋ ಲೆಕ್ಕಾಚಾರ ಹಾಕತೊಡಗಿದೆ. "ಮದುವೆ ನಿಶ್ಚಯವಾದೋನು ಇನ್ನೊಂದು ಹೆಣ್ಣಿನ ಬಗ್ಗೆ ಯೋಚಿಸೋದು ಅಂದ್ರೆ ಏನು?ಅದು ಬುದ್ಧಿಗೆ ತಿಳಿಯುತ್ತೆ. ಮನಸ್ಸಿಗಲ್ಲ ಅನ್ನೋ ಹುಂಬ ಸತ್ಯದ ಮಿಥ್ಯ ಅರಿವು. ಅಷ್ಟಕ್ಕೂ, ಹುಡುಗಿ ಒಪ್ಪಿಗೆಯಾ ಅಂತ ನನ್ನ ಕೇಳಿಯೇ ಇಲ್ವೆ ಇವರು?" ಯಾವತ್ತೂ ಇಲ್ಲದ್ದು, ಒಂಥರಾ ಭಂಡ ಧೈರ್ಯ ಬಂದು ದೊಡ್ಡ ಗಂಡಸಿನ ಹಾಗೆ ಯೋಚಿಸಲು ಶುರು ಮಾಡಿದ್ದೆ.
ದಿನಸಿ ಅಂಗಡಿ ವೆಂಕಟರಮಣ ಶೆಟ್ರ ಮಗ ನನ್ನ ಓರಗೆಯವನು. ಊರಲ್ಲಿ ಅಟ್ ಲೀಸ್ಟ್ ಒಂದು ಬೈಕ್ ಅಂತ ಇದ್ದದ್ದು ಅವನ ಹತ್ರಲೇ. ಅದೂ ಬಜಾಜ್ ಚೇತಕ್. ಒಂದರ್ಧ ಗಂಟೆ ಗಾಡಿ ಬೇಕಿತ್ತು ಅಂತ ಕೇಳಿ ಇಸಕೊಂಡು, ಕೊಪ್ಪಕ್ಕೆ ಹೊರಟೆ. ಮನಸ್ಸಿನಲ್ಲಿ ಏನೇನೋ ಯೋಚನೆಗಳು. ಅವ್ಯಕ್ತ ಭಾವನೆಗಳು. ಯಾವುದೂ ಸ್ಪಷ್ಟವಾಗಿಲ್ಲ. ಗಾಡಿ ಏರಿ ಹೊರಟು ಕೊಪ್ಪ ತಲುಪಿದ್ದೇ ತಿಳಿಯಲಿಲ್ಲ. ಹೋಗಿ ಅಲ್ಲಿ ವಿಚಾರಿಸಿದಾಗ ಮನೆ ತೋರಿಸಿದರು. ಬಾಗಿಲು ಬಡಿದೆ. ಒಬ್ಬ ಆಳೆತ್ತರದ ವ್ಯಕ್ತಿ ಬಾಗಿಲು ತೆಗೆದರು.
"ಯಾರು, ಗೊತ್ತಾಗ್ಲಿಲ್ವಲ್ಲಾ.."
"ನಾ...ನು ಇಲ್ಲೇ ಆಚೆ ಕಡೆ ಮಾರೇನಹಳ್ಳಿ ಚಂದ್ರೇಗೌಡರ ಮಗ."
"ಓಹೋ, ನಮ್ ಭಾವಿ ಅಳೀಮಯ್ಯ. ಬಲ್ಲಿ, ಬಲ್ಲಿ"
ಅವ್ರು ಹುಡುಗಿ ತಂದೆ ಇರ್ಬೇಕು ಅಂದ್ಕೊಂಡೆ. ಅಷ್ಟರಲ್ಲೇ, "ಅವ್ವ ತರಂಗಿಣಿ..ನೋಡು ಬಾ ಯಾರ್ ಬಂದವರೆ ಅಂತವ.." ಅರುಚಿದರು.
ಒಳಗಿನಿಂದ ಲಂಗ ದಾವಣಿ ಧರಿಸಿದ್ದ ಲಕ್ಷಣವಾಗಿ ಕಾಣುತ್ತಿದ್ದ ಆಕೆ ಬಂದಳು. ಮನಸ್ಸು ತಕ್ಷಣ ವಾಹಿನಿಯ ಕಡೆ ಹರಿಯಿತು. ಮಾಡರ್ನ್ ಬಟ್ಟೆ ಧರಿಸಿದ್ದ ಅವಳು, ಲಂಗ ದಾವಣಿ ಧರಿಸಿರುವ ಇವಳು. ತುಲನೆ! ನಾಚಿಕೊಂಡಿದ್ದಳೋ ಇಲ್ಲವೋ ಗೊತ್ತಾಗಲಿಲ್ಲ. ಅವಳ ಕಡೆ ನೋಡಲೇ ಇಲ್ಲ. ಅವರಪ್ಪ, ಅಲ್ಲಿಂದ ಎದ್ದು ಹೋಗಿ ಒಳ್ಳೆಯ ಕೆಲಸ ಮಾಡಿದರು.
"ನಾನು ಅರ್ಣವ್."
"ಗೊತ್ತು. ಫೋಟೋ ನೋಡಿದ್ದೀನಿ."
"ಒಹ್! ನಂಗೆ ಗೊತ್ತಿರ್ಲಿಲ್ಲ. ನಿಮ್ಮನ್ನ ನಾನು ಇದೆ ಫಸ್ಟ್ ನೋಡ್ತಿರೋದು. ನಿಮ್ ಹತ್ರ ಸ್ವಲ್ಪ ಮಾತಾಡಬೇಕು"
ಅವಳಿಗೆ ಖುಷಿ ಆಯ್ತು ಅನ್ಸುತ್ತೆ. ಮುಖವನ್ನೊಮ್ಮೆ ನೋಡಿದೆ.
"ಹೇಳಿ"
"ಇಲ್ಲಿ ಬೇಡ, ಬೇರೆ ಎಲ್ಲಾದ್ರೂ ಪ್ರಶಾಂತ ಜಾಗ ಇದ್ರೆ ಹೋಗೋಣ್ವಾ?"
"ಸರಿ ಬನ್ನಿ"
ಅವಳ ಹಿಂದೆ ನಡೆದೇ. ಪಾಪ ಅವಳಿಗೇನು ಗೊತ್ತು, ಶಾಂತವಗಿರೋ "ತರಂಗಿಣಿ"ಗೆ ಕಲ್ಲೆಸೆದು ಅಲ್ಲಿ ಒಂದು ಕೋಲಾಹಲವನ್ನೇ ಉಂಟು ಮಾಡಲಿದೆ ನನ್ನ ಮಾತು ಎಂದು?
ಊರ ಕೆರೆಯ ಮೇಲೆ, ನಿರ್ಜನ ಸ್ಥಳದಲ್ಲಿ ಕುಳಿತೆವು. ನಾನು ನೀರನ್ನೇ ನೋಡುತ್ತಿದ್ದೆ. ಆಕೆ ನನ್ನನ್ನೇ ದಿಟ್ಟಿಸುತ್ತಿದ್ದಳು.
"ನಿಮಗೆ ಈ ಮದ್ವೆ ಒಪ್ಪಿಗೇನಾ?"
ಅನಾಮತ್ತಾಗಿ ಬಂದ ಈ ಪ್ರಶ್ನೆಗೆ ಆಕೆ ನಿರುತ್ತರಳಾದಳು ಅನ್ನಿಸಿತು.
"ಹೌದು. ಅಪ್ಪನಿಗೆ ಇಷ್ಟ ಅಂದ ಮೇಲೆ ನನಗೂ ಕೂಡ. ಮಕ್ಕಳಾಗಿ ತಾಯ್ ತಂದೆಯರ ಆಸೆ ನಡೆಸಿಕೊಡೋದು ನಮ್ ಕರ್ತವ್ಯ ಅಲ್ವ?"
ಇವಳ ಮುಂದೆ ನಾನು ಬಹಳ ಸಣ್ಣವನಾಗಿ ಹೋದೆ ಅನ್ನಿಸ್ತು ಒಂದೇ ಮಾತಿಗೆ.
"ನಿಮಗೆ?"
"ಇಲ್ಲ. ನಂಗೆ ಬೇರೆ ಒಬ್ಬ ಹುಡುಗಿ ಹಿಡ್ಸಿದಾಳೆ"
"    "
"ಏನಾದರೂ ಮಾತಾಡಿ. ಪ್ಲೀಸ್. ನೀವೂ ಡಿಗ್ರಿ ಓದಿದ್ದೀರಿ. ಅರ್ಥ ಮಾಡ್ಕೊತೀರಾ ಅಂದ್ಕೊಂಡಿದೀನಿ."
"ಡಿಗ್ರಿ ಮಾಡಿದ ಕ್ಷಣಕ್ಕೆ ನಮ್ ತನ ನಾವ್ ಬಿಡಬೇಕು ಅಂತಲ್ಲ."
ಕಪಾಳಕ್ಕೆ ತೆಗೆದು ಬೀಸಿದ ಹಂಗಿತ್ತು ಮಾತು. ಮತ್ತೆ ಅಸಹಾಯಕನಾದೆ. ಅದರೂ ಈ ಬಾರಿ ಬಿಡಲಾರೆ ಅಂತ ನಿರ್ಧರಿಸಿಕೊಂಡೆ.
"ಹಾಗಲ್ಲ..."
"ಹಂಗೂ ಅಲ್ಲ, ಹಿಂಗೂ ಅಲ್ಲ. ನೀವು ಯೋಚ್ಸೋ ಹಂಗಂತೂ ಅಲ್ವೇ ಅಲ್ಲ."
ಮತ್ತೆ ಚಡೀ ಏಟು.
"ನಾನು ನನ್ನ ಫ್ರೆಂಡ್ಸ್ ಗೆಲ್ಲಾ ಹೇಳ್ಕೊಂಡ್ ನಿಮ್ ಫೋಟೋ ತೋರ್ಸಿದೀನಿ. ಇದಕ್ಕೇನ್ ಹೇಳ್ತೀರಾ?"
"ಅದು ನನ್ ತಪ್ಪಲ್ಲ."
"ತಪ್ಪು ನಿಮ್ದಲ್ದಿದ್ರೂ ಹಾಳಾಗೋದು ನನ್ ಬಾಳು."
"ಅದಕ್ಕೆ ನಾನ್ ಹೊಣೆ ಅಲ್ಲ. ಮದ್ವೆ ನನ್ ಸ್ವಂತ ವಿಷ್ಯ. ಅದರಲ್ಲಿ ಬೇರೆಯವರು ತಲೆ ಹಾಕೋದು ನಂಗೆ ಇಷ್ಟ ಇಲ್ಲ."
"ನಿಮ್ ಅಪ್ಪಾನೆ ನಿಮಗೆ ಬೇರೆಯವರ?"
"ನೋಡಿ, ನಾನು ವಾಹಿನಿ ಅನ್ನೋ ಹುಡುಗೀನ ಇಷ್ಟ ಪಟ್ಟಿದ್ದೀನಿ. ಪ್ರೀತಿ ತಂತಾನೇ ಬೆಳೀಬೇಕು. ಗೊಬ್ರ ಹಾಕಿ ಬೆಳ್ಸಕ್ಕಾಗಲ್ಲ."
"ನನ್ ಗತಿ?"
"ಅದಕ್ಕೆ ಹೇಳೋಕೆ ಬಂದೆ. ಇನ್ನೂ ನಿಶ್ಚಿತಾರ್ಥನೂ ಅಗಿಲ್ವಲ್ಲ..."
"ನಿರ್ಧಾರ ಆಗಿದ್ಯಲ್ಲ?"
"ಮನಸಲ್ಲಿ ಅಂದ್ಕೊಂಡಿರೋದಕ್ಕೂ ವಾಸ್ತವಕ್ಕೂ ವ್ಯತ್ಯಾಸ ಇದೆ."
"ಹ್ಹ"
"ನೋಡಿ, 'ಅರ್ಣವ'ವನ್ನ ಯಾವತ್ತಿದ್ರೂ 'ವಾಹಿನಿ' ಹರೀತಾ ಹರೀತಾ ಸೇರಬೇಕು. ನಿಂತಲ್ಲೇ ನಿಂತಿರೋ, ತಟಸ್ಥವಾಗಿರೋ 'ತರಂಗಿಣಿ' 'ಅರ್ಣವ'ವನ್ನ ಸೇರೋ ಕನಸು ಕಂಡ್ರೆ ನಿಜವಾಗುತ್ತ?"
"ನಾನು ಕನಸು ಕಂಡಿಲ್ಲ. ನನ್ನಲ್ಲಿ ಆ ಆಸೆ ಹುಟ್ಸಿದಾರೆ."
"ತೆಗೆದ್ ಹಾಕ್ಬಿಡಿ ಆ ಆಸೇನ ಮನಸ್ಸಿಂದ."
"ಎಷ್ಟು ಸುಲಭದ ಮಾತು!"
"ನಾ ಹೇಳೋದ್ ಹೇಳಿದೀನಿ. ಮದ್ವೆ ಆಗಿ ಇಬ್ರೂ ತೊಂದ್ರೆ ಪಡೋ ಬದ್ಲು ಈಗಲೇ ಸರಿ ಮಾಡ್ಕಂಡ್ರೆ ಒಳ್ಳೇದು. ನನ್ ಕೆಲಸ ನಾ ಮಾಡಿದೀನಿ. ನಾ ಬರ್ತೀನಿ."
ಸುಮ್ಮನೆ ಎದ್ದು ಬಂದೆ ಬಿಟ್ಟೆ. ಅವಳ ಪ್ರತಿಕ್ರಿಯೆಯನ್ನು ಕೂಡ ನಿರೀಕ್ಷಿಸಲಿಲ್ಲ. ಏನೋ ದೊಡ್ಡದನ್ನು ಸಾಧಿಸಿದವನ ಹುಮ್ಮಸ್ಸು ನನ್ನಲ್ಲಿ. ವಿಜಯೋತ್ಸಾಹದ ನಗು, ಮುಖದಲ್ಲಿ.
ಮನೆಗೆ ಬಂದೆ. ಅಮ್ಮ ಅಡುಗೆ ಮಾಡುತ್ತಿದ್ದರು. "ಅಮ್ಮ, ಆ ದೇವಸ್ಥಾನದ ಎದುರು ಮನೆಗೆ ಏನು ಅಷ್ಟೊಂದು ಜನ?"
"ಓ, ಪುಟ್ರಾಮಯ್ನೋರ್ ಮನೆಯಾ? ಅವ್ರ ಮೊಮ್ಮಗಳ ಲಗ್ನವಂತೆ. ಇಕಾ, ಈಗ ತಾನೇ ಕಾಲ್ಡು ಕೊಟ್ ಹ್ವಾದ್ರು.."
"ವಾಹಿನಿ ವೆಡ್ಸ್ ಹರೀಶ್"
ಭೂಮಿ ಸೀಳು ಬಿಟ್ಟ ಹಂಗಾಯ್ತು. ನನ್ನ ಅವಿವೇಕತನಕ್ಕೆ ಮೆಟ್ಟು ತಗೊಂಡು ಹೊಡ್ಕೊಬೇಕು ಅನ್ನಿಸ್ತು. ಯಾಕ್ ಹಿಂಗಾಯ್ತು?
ಯಾಕ್ ನಾನ್ ಒಂದ್ ಕ್ಷಣ ನನ್ ಬುದ್ಧಿ ಹೇಳಿದ ಹಂಗೇ ಕೇಳಲಿಲ್ಲ? ನಾನು ಮೊದಲ ಬಾರಿಗೆ ಇಷ್ಟ ಪಟ್ಟದ್ದನ್ನು ಪಡೀಬೇಕು ಅನ್ನೋ ಹಟವೋ ಅಥವಾ ನನ್ನ ಬದುಕಿನಲ್ಲಿ ನಿರ್ಧಾರ ತಗೊಳೋಕೆ ಇವರ್ ಯಾರು ಅನ್ನೋ ಸಿಟ್ಟೋ ನನ್ನ ಕೈಲಿ ಈ ಥರ ಮಾಡಿಸಿತೋ?
ತುಲನೆ! ಈಗ ಮಾಡಬೇಕು. ಅಪ್ಪ ಅಮ್ಮನ ನಿರ್ಧಾರಗಳಿಗೆ ಬೆಲೆ ಕೊಡುವ ಅವಳೆಲ್ಲಿ? ನಾನು, ನನ್ನದು ಅಂತ ಅಲೆಯೋ ನಾನೆಲ್ಲಿ. ಕುಬ್ಜನಾಗಿ ಹೋದೆ. ಎಲ್ಲವೂ ಒಮ್ಮೆಲೇ ಕಣ್ಣ ಮುಂದೆ ಹಾಯ್ದು ಹೋಯ್ತು. "ಈ ಕ್ಷಣ ಹೋಗಿ ತರಂಗಿಣಿಯ ಕಾಲು ಹಿಡಿದು ಕ್ಷಮಿಸು ಅನ್ಬೇಕು."
ನಿರ್ಧರಿಸಿ ಹೊರಟೆ. "ನಾನು.."
"ಥೂ, ನಾನು ನಾನು ಅಂತ ಸತ್ತೆಯಲ್ಲೋ ಬೇವರ್ಸಿಯೇ!" ಅಂತರಾತ್ಮದ ಛೀಮಾರಿ.
ಗಾಡಿ ಕೇಳುವಷ್ಟು ವ್ಯವಧಾನವೂ ಇಲ್ಲದೆ ಓಡಿದೆ. ಮನಸಲ್ಲಿ, ತಲೆಯಲ್ಲಿ ಒಂದೇ ಯೋಚನೆ. 'ನನ್ನ ಈ "ಅಹಂ"ಭಾವವೇ ಹೀಗೆ ಮಾಡಿಸಿತೆ?'
ಕೊಪ್ಪ ತಲುಪಿದೆ. ರಾತ್ರಿ ೯ ದಾಟಿತ್ತು. ಒಂದು ದಿನದಲ್ಲಿ ಏನೆಲ್ಲಾ ಆಯಿತು ಈ ಹಾಳಾದ ಮನಸ್ಸಿಂದ ಅಂತ ಅಂದುಕೊಳ್ಳುತ್ತ ಮೆನೆ ಕಡೆ ನೋಡಿದೆ. ಜಿಟಿ ಜಿಟಿ ಮಳೆ ಶುರುವಾಯ್ತು. ಒದ್ದೆ ಮುದ್ದೆಯಾದೆ. ಮನೆ ಬಳಿ ಹೋದೆ. ಅಂಗಳದಲ್ಲಿ ಚಪ್ಪಲಿಗಳು ಚೆಲ್ಲಾಪಿಲ್ಲಿಯಾಗಿದ್ದವು.
"ಓ ಅರ್ಣವ ಬಂದ್ರು"
ಗುಸು ಗುಸು ಕೇಳಿಸಿತು.
"ಅಯ್ಯೋ, ಬಾಪ್ಪಾ.. ನನ್ ಮಗಳ ಈ ಯೋಗಮುದ್ರೆ ನೋಡಕ್ ಬಂದ್ಯಾ?" - ತರಂಗಿಣಿಯ ಅಮ್ಮನ ಅಳು!
ಕಾಲುಗಳು ನಡುಗಲು ಹತ್ತಿದವು.
"ನೀವ್ ಹಂಗ್ ಹೋದ ಮೇಲೆ ಮನೆಗೆ ಬಂದು ಬಟ್ಟೆ ಒಕ್ಕಬತ್ತೀನಿ ಅಂತೇಳಿ ಕೆರೆ ಕಡೀಕೆ ಓದಳು ಕಣಪ್ಪ..ಕಾಲು ಜಾರಿ ಬಿದ್ದೌಳೆ ಅನ್ನುಸ್ತದೆ. ಜೇಡಿ ಮಣ್ಣು..ಸೆಳಕಂದ್ಬುಡ್ತು."
ವಿಕಾರ ರೋದನ.
"ಸೆಳೆದದ್ದು ಜೇಡಿ ಮಣ್ಣಲ್ಲ. ನನ್ನ ಅಹಂಕಾರ ಅವಳನ್ನ ದೂಕಿತು" ಮನಸ್ಸಲ್ಲೇ ಅಂದುಕೊಂಡೆ. ಮಳೆಯಲ್ಲೂ ಮೈ ಬೆವರತೊಡಗಿತು.
"ಪಾಪ. ಮಾತಾಡಬೇಕು ಅಂದಾಗ ಒಂದು ಮಾತು ಕೇಳದೆ ನನ್ ಜೊತೆ ಬಂದಳು. ಅವಳ ಬಗ್ಗೆ ಯೋಚನೆಯೇ ಮಾಡದೇ ನಾನು ಕೇವಲ ನನ್ನ ಬಗ್ಗೆ ಯೋಚನೆ ಮಾಡಿದೆ. ಎಂಥ ಹೀನ ಜನ್ಮ ನನ್ನದು?" ಈ ಬಾರಿ ನಿಜವಾದ ಅವಮಾನ ಆದಂತಾಯಿತು. ಬದುಕುವ ಆಸೆಯನ್ನೇ ಕಿತ್ತುಕೊಳ್ಳುವಂಥ ಅವಮಾನ. ಪ್ರಯೋಜನ ಏನು? ನಾನು "ನನ್ನ ಜೀವನ" ಎಂಬ ಯಜ್ಞ ಕುಂಡಕ್ಕೆ ತರಂಗಿಣಿಯನ್ನು "ಸಮಿತ್ತಾಗಿ" ಬಳಸಿಕೊಂಡಿದ್ದಾಗಿತ್ತು ಅದಾಗಲೇ. ತರಂಗಿಣಿಯ ಶಾಂತ ಮಾನಸ ಸರೋವರದಲ್ಲಿ ಸುಮ್ಮನೆ ಕಲ್ಲೆಸೆದು ಘೋರ ಪ್ರಳಯ ಉಂಟು ಮಾಡಿ..ಅತ್ತ ವಾಹಿನಿಯೂ ಇಲ್ಲ, ಇತ್ತ ತರಂಗಿಣಿಯೂ..ಛೆ!
"ಮನಸ್ಸೇ ಹೀಗಾ?"
ಅಂತರಾತ್ಮದ ವಿಕೃತ ನಗು!
ಮಂದಹಾಸ ಬೀರುತ್ತ ಚಿರ ನಿದ್ರೆಗೆ ಜಾರಿದ್ದ ತರಂಗಿಣಿಯ ಮಂದಹಾಸ ನನ್ನನ್ನು ಇರಿದು ಇರಿದು ಕೊಲ್ಲುತ್ತಿತ್ತು!
ಸುಮ್ಮನೆ ಪಡಸಾಲೆಯ ಕಂಬಕ್ಕೆ ಒರಗಿ ಕುಸಿದೆ..

Saturday, January 9, 2010

ಶಿರಾಡಿಯಲ್ಲೊಂದು ಪಯಣ..

  ಆಹ್..ಪರೀಕ್ಷೆಗಳು ಮುಗಿದೇ ಹೋದವು.. ೯೫% ಇಂಜಿನಿಯರಿಂಗ್ ಮುಗ್ಸಿಯೇಬಿಟ್ಟೆ! ಪರೀಕ್ಷೆಗೆ ಓದಿ ಓದಿ (!) ಸುಸ್ತಾಗಿತ್ತು. ಮೈಸೂರು ಬೆಂಗಳೂರ ಹಾದಿಯನ್ನೇ ಹಿಡೀತಾ ಇರೋದು ನನ್ನ ಸುಸ್ತಿಗೆ ಬೇಜಾರಿಗೆ  ಇನ್ನೊಂಚೂರು ಕುಮ್ಮಕ್ಕು ಕೊಡ್ತಾ ಇತ್ತು.. ಮುಂಚೆ ಎಲ್ಲ..ಯಾಕೆ ಈಗ್ಗೆ ೫ ವರ್ಷಗಳ ಕೆಳಗೆ ರಾತ್ರಿ ೮ ಗಂಟೆ ಆಯ್ತು ಅಂದ್ರೆ ಸಾಕು, ಮೈಸೂರಿನ ಬೀದಿ ಬೀದಿಗಳೂ ಬಿಕೋ ಅಂತಿದ್ವು. ಅಷ್ಟು reserved ಆಗಿದ್ರು ಜನ. ಆದ್ರೆ ಈಗ, ಯಾವ್ದಾದ್ರೂ ಮುಖ್ಯ ರಸ್ತೆ ಬದೀಲಿ ಮನೆ ಮಾಡ್ಕೊಂಡ್ಬಿಟ್ರೆ  ದೇವ್ರೇ ಗತಿ! ಎಲ್ಲಿಗಾದ್ರೂ ಹೋಗ್ಬೇಕು ಅಂದ್ರೆ ೫ ನಿಮಿಷ ಮುಂಚೆ ಪ್ಲಾನ್ ಮಾಡಿದರೂ ಸಾಕಿತ್ತು ಆಗ, ಆರಾಮಾಗಿ ಹೋಗಿ ಬರಬಹುದಿತ್ತು. ಈಗ ಹಿಂದಿನ ದಿನವೇ ಪ್ಲಾನ್ ಮಾಡಿ ಹೊರಡಬೇಕು. ಸಾಕ್ಷಿ ಕೇಳ್ತೀರಾ? ಮೊದಲೆಲ್ಲ ಮೈಸೂರಿಂದ ಕೆ.ಆರ್.ನಗರಕ್ಕೆ ೧ ಗಂಟೆಯಲ್ಲಿ ಹೋಗಬಹುದಿತ್ತು. ಈಗ ಅದು ಇನ್ನೊಂದರ್ಧ ಗಂಟೆ ಜಾಸ್ತಿಯಾಗುತ್ತೆ! ಯಾಕಂದ್ರೆ, ಮೈಸೂರಿನ ಮುಖ್ಯ ಬಸ್ ನಿಲ್ದಾಣದಿಂದ ಹಿನಕಲ್ ದಾಟಿ ಮುಂದೆ ಹೋಗೋದಕ್ಕೆ ೧೧ ಸಿಗ್ನಲ್ ಗಳ ಲಕ್ಷ್ಮಣ ರೇಖೆ! ಹಿಂಗೆಲ್ಲ ಇದ್ರೆ ಯಾರ್  ತಾನೇ ನಖಶಿಖಾಂತ ಉರ್ಕೊಳಲ್ಲ ಹೇಳಿ.. ಹಂಗಾಗೆ ನಾನು ಆಗಾಗ ಎಲ್ಲಾದ್ರೂ ಕಾಡು ಮೇಡು ಅಲೆಯೋಕೆ ಹೋಗೋದು. ನನ್ ಸ್ನೇಹಿತರೆಲ್ಲ ಬೈತಾರೆ ನನ್ನ ಕಾಡು ಪ್ರಾಣಿ ಅಂತ..ಆದ್ರೆ "ಕತ್ತೆ ಬಲ್ಲುದೆ ಕಸ್ತೂರಿ ಸುವಾಸನೆಯ" ಅಂದ್ಕೊಂಡು ಸುಮ್ನಾಗ್ಬಿಡ್ತೀನಿ.


  ಅರೆ ಬೆಟ್ಟ ರೈಲ್ವೆ ಸ್ಟೇಷನ್ನಿಂದ ಕಾಣೋ ದೃಶ್ಯ.

ಈ ಬಾರಿ ಪರೀಕ್ಷೆಗಳು ನಡೀತಿರ್ವಾಗ್ಲೇನೆ ಒಂದ್ subject ಗೆ ೧ ವಾರ ರಜ ಸಿಕ್ತು. ಆಗ್ಲೇ ಏನೋ ದೇವರ ಕೃಪೆಯಿಂದ, ನನ್ ಗೆಳೆಯ ಸುಮಂತ್ ನ ತಂದೆ ರೈಲ್ವೆಯಲ್ಲಿ ಕೆಲಸ ಮಾಡೋದ್ರಿಂದ, ಸಕಲೇಶಪುರದಿಂದ ಸುಬ್ರಹ್ಮಣ್ಯದವರೆಗೂ inspection car ನಲ್ಲಿ ಹೋಗೋ ಪುಣ್ಯ ಪ್ರಾಪ್ತಿಯಾಯ್ತು. ಅಬ್ಬಾ ಸ್ವರ್ಗಕ್ಕೆ ಮೂರೇ ಗೇಣು ಅನ್ನೋ ಹಂಗಿದೆ ಜಾಗ ನಮ್ಮ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ. ಸುಮ್ನೆ ರೈಲಲ್ಲಿ ಹೋಗಿ ಬಂದದ್ದಾಯಿತು ಆಗ. ಆದ್ರೆ ತಲೆ ತುಂಬಾ ಬರೀ ಅವೇ, ಆ ಬೃಹತ್ ಪರ್ವತಗಳೇ ತುಂಬಿವೆ! ಕೊನೆ ಪರೀಕ್ಷೆನ ಹೆಂಗೆ ಬರೆದ್ನೋ ಆ ಪರಮಾತ್ಮನಿಗೇ ಗೊತ್ತು.
ಕೊನೆ ಪರೀಕ್ಷೆ ಹಿಂದಿನ ದಿನ ನನ್ ಇನ್ನೊಬ್ಬ ಸ್ನೇಹಿತ ಬಾಲಾಜಿ ಫೋನ್ ಮಾಡಿ ತಾನು ಶಿರಾಡಿ ಘಾಟಿಯ ಅರೆ ಬೆಟ್ಟಕ್ಕೆ trek ಹೋಗಣ ಅಂದ್ಕೊಂಡಿದ್ದೀನಿ ಅಂದ. ಅವನ ಜೊತೆ ಅವನ ಇನ್ನೊಬ್ಬ ಗೆಳೆಯ ಹೊರಡ್ತಿದ್ದಾನೆ ಅಂತಿತ್ತು ಅವನ ಅಂಬೋಣ! ನನ್ ಮನಸ್ಸು ಈ ಕಡೆ ಪುಕ ಪುಕ ಅಂತಿತ್ತು.. ಛಾನ್ಸ್ ಸಿಕ್ಕಿದ್ರೆ ಅವನ ಗೆಳೆಯನ ಬದ್ಲು ನಾ ಹೋಗಬಹುದಿತ್ತು ಅಂತ! ಕಡೆಗೆ ಅವನೂ ಹಂಗೆ ಅಂದ. I was very happy :P ನಮ್ ಜೊತೆಗೆ ಆಕಾಶ್ ಕೂಡ ಬರ್ತೀನಿ ಅಂದ.. ಸರಿ ಶುರುವಾಯ್ತು ನಮ್ ಪ್ರಯಾಣ..
04/01/2010, ರಾತ್ರಿ ೧೧.೦೦ ಗಂಟೆಗೆ ಧರ್ಮಸ್ಥಳಕ್ಕೆ ಹೋಗೋ ರಾಜಹಂಸ ಬಸ್ಸು ನಮಗಾಗಿ ಕಾಯುತ್ತಿತ್ತು. ಬಸ್ ಟಿಕೆಟ್ ಬುಕ್ ಮಾಡ್ಸಿಲ್ಲ..ಸೀಟ್ ಸಿಗುತ್ತೋ ಇಲ್ವೋ ಅನ್ನೋ ಭಯ ಬೇರೆ ಇತ್ತು. ಪುಣ್ಯಕ್ಕೆ, ರಿಸರ್ವ್ ಮಾಡ್ಸಿದ್ ೩ ಜನ ಪುಣ್ಯಾತ್ಮರು ಬಂದಿರಲಿಲ್ಲ..ಹಂಗಾಗಿ ಮೊದಲ ೩ ಸೀಟ್ಗಳೇ  ಸಿಕ್ಕವು.
"ಗುಂಡ್ಯ ೩ ಕೊಡಿ ಸಾರ್! ಸಾರ್ ಹಂಗೆ, ಗುಂಡ್ಯ ಬಂದಾಗ ಚೂರು ಎಬ್ಬಿಸ್ಬಿಡಿ ಸಾರ್!"
"ಆಯ್ತು ಕಣ್ರೀ!"
  ಹಾಸನದವರೆಗೂ ಪ್ರಯಾಣದ ಅನುಭವವೇ ಆಗ್ಲಿಲ್ಲ. ರಸ್ತೆ ನಿಜವಾಗಿ ಚೆನ್ನಾಗಿದೆ. ಅಲ್ಲಿಂದ ಸಕಲೇಶಪುರದವರೆಗೆ ಪರವಾಗಿಲ್ಲ. ಆಮೇಲಿಂದ ಯಾರದ್ರೂ ಬಸುರಿ ಹೆಂಗಸು ಪ್ರಯಾಣ ಮಾಡಿದ್ರೆ, ರಸ್ತೆಯಲ್ಲೇ ಮಗು ಹೆರೋ ಸನ್ನಿವೇಶ ಬರಬಹುದಾದಂಥ  ಘೋರ ಪರಿಸ್ಥಿತಿಯಲ್ಲಿದೆ. ಸಕಲೇಶಪುರದಲ್ಲಿ ಬಿಸಿ ಬಿಸಿ ಕಾಪಿ ಹೀರಿ ಮತ್ತೆ ಬಸ್ ಹತ್ತಿದ್ವಿ. ನಿದ್ದೆ ಅಂತೂ ಈ ಹಾಳಾದ್ ರಸ್ತೇಲಿ ಹತ್ರಕ್ಕೂ ಸುಳಿಯಲ್ಲ ಅಂತ ನಾವೂ ಕೂಡ ಡ್ರೈವರ್ ಕ್ಯಾಬಿನ್ ನಲ್ಲೆ ಕೂತ್ವಿ. ಡ್ರೈವರ್ ಜೊತೆ ಎಲ್ಲ ಥರದ ವಿಷಯಗಳನ್ನೂ ಮಾತಾಡ್ಕೊಂಡು ಕೂತಿದ್ವಿ. ಭಾಳ ತಿಳ್ಕೊಂಡಿದ್ದ ಮನುಷ್ಯ!  ನೋಡ ನೋಡುತ್ತಿದ್ದ ಹಂಗೇ ಗುಂಡ್ಯ ಬಂದೇ ಬಿಡ್ತು! ಇಳಿದ್ವಿ..ಸುಮಾರು ೪.೧೫ ಗಂಟೆ ಆಗ. ಅಷ್ಟು ಹೊತ್ತಲ್ಲಿ ಟಿಕೆಟ್ ಚೆಕಿಂಗ್ ಅಂತ ಬಂದ್ರು ಇಬ್ರು. ನಾನಂತೂ ಬೈಕೊಂಡೆ ಮನಸ್ಸಲ್ಲೇ ಚೆನ್ನಾಗಿ. ಮನುಷ್ಯರಿಗೆ ನಿದ್ದೆ ಬರೋದೇ ಮುಂಜಾವಿನಲ್ಲಿ. ಅದನ್ನೂ ಹಾಳ್ ಮಾಡಕ್ಕೆ ಬಂದಿದ್ದಾನಲ್ಲ ಅಂತ! ನಮ್ ಟಿಕೆಟ್ ತೋರಿಸಿ ಹೊರಟ್ವಿ ನಾವು. ಚೆಕ್ ಪೋಸ್ಟ್ನಲ್ಲಿ ಒಬ್ಬ ಆಸಾಮಿ ಪೋಲೀಸು, ಆರಾಮಾಗಿ ಗೊರಕೆ ಹೊಡೀತಿದ್ದ. ಅಣ್ಣ, ಗುಂಡ್ಯ ಫಾರೆಸ್ಟ್ ಐ.ಬಿ.ಗೆ ಹೆಂಗೆ ಹೋಗ್ಬೇಕು ಅಂತ ಚುಮು ಚುಮು ಚಳೀಲಿ ನಡುಗಿಕೊಂಡು ಕೇಳಿದ್ರೆ, ಅದಕ್ಕೆ ಸುಬ್ರಹ್ಮಣ್ಯಕ್ಕೆ ಹೋಗ್ಬೇಕು ಅಂದ್ಬಿಡೋದೇ ಆತ? ನಮಗೆ ಎದೆ ಡಮ್ ಅಂದ್ಬಿಡ್ತು ಒಂದ್ ಕ್ಷಣ. ಪಕ್ಕದಲ್ಲೇ ಒಂದು ಹೋಟೆಲಿನವರು ಎದ್ದಿದ್ರು. ಅವರನ್ನ ಕೇಳಿದ್ದಕ್ಕೆ, ಇದೆ ರಸ್ತೇಲಿ ಹೋದ್ರೆ ಮುಂದೆ ಕೆಂಪು ಹೊಳೆ ಸೇತುವೆ ಸಿಗುತ್ತೆ. ಅಲ್ಲಿಂದ ಸ್ವಲ್ಪ ಮುಂದೆ ಅಂತ ತನ್ನ ಕನ್ನಡ-ಮಲಯಾಳಂ ಮಿಶ್ರಿತ ಭಾಷೇಲಿ ಹೇಳಿದ. ನೋಡಿ ನಮ್ ಹಣೆಬರಹ. ಕರ್ನಾಟಕದ ಮಧ್ಯದಲ್ಲಿ ಮಲಯಾಳಿಗಳ ದರ್ಬಾರು! ತುಳು ನಾಡು ಬೇಕು ಅಂತ ಕೂಗೋ ಜನ ಅವರ ಸ್ಥಳವನ್ನ ಜೋಪಾನ ಮಾಡ್ಕೋಬೇಕೋ ಬೇಡವೋ? ಹುಡುಕಿದರೂ ಒಬ್ರೂ ಕನ್ನಡದವರಿಲ್ಲ, ತುಳುವರೂ ಇಲ್ಲ! ಐ.ಬಿ. ಹತ್ರ ಹೋದಾಗ ಅಲ್ಲಿ ಕನ್ನಡದವರು ತುಳುವರೂ ಇದ್ದದ್ದು ಗೊತ್ತಾಯ್ತು! ಈಗ ಇನ್ನೊಂದ್ ತೊಂದ್ರೆ ಎದುರಾಯ್ತು! ಐ.ಬಿ. ಕಾವಲುಗಾರ ಕೋಣೆಗೆ ಬೀಗ ಜಡಿದುಕೊಂಡು ಮಲಗಿದ್ದ! ಎಬ್ಬಿಸೋದಕ್ಕೆ ಮನಸ್ಸು ಬರ್ಲಿಲ್ಲ.. ಹಂಗಾಗಿ ೬ ಗಂಟೆವರೆಗೂ ಅಲ್ಲೇ ಸೇತುವೆ ಮೇಲೆ ಕೂತ್ಕೊಂಡು ಚಂದ್ರ ತಾರೆಗಳನ್ನ ನೋಡ್ತಾ ಇದ್ವಿ..


  ಸೇತುವೆ ಬಳಿಯಿಂದ ಕಾಣೋ ವೆಂಕಟಗಿರಿಯ ದೃಶ್ಯ.

ಸ್ವಲ್ಪ ಹೊತ್ತಾದ ಮೇಲೆ ಹೋಗಿ, ಆ ಕಾವಲುಗಾರನ ಬಳಿ ಮಾತಾಡಿ ರೂಂ ಪಡೆದೆವು.ಆಕಾಶ್ ಮಲಕ್ಕೊಂಡ. ನಾನೂ ಬಾಲಾಜಿ ಇಬ್ರೂ ಕೆಂಪು ಹೊಳೆಯಲ್ಲಿ ಆಡಿ ಬಿದ್ದು ಬಂದೆವು!

ಕೆಂಪು ಹೊಳೆಯೊಳಗೆ..
  ಕಾವಲುಗಾರನೇ ನಮಗೆ ಗೈಡ್ ಹುಡುಕಿಕೊಟ್ಟ. ದೇವಪ್ಪ ಅಂತ ಅವರ ಹೆಸರು..ಕೇವಲ ೭೦ ವರ್ಷದ ಯುವಕ! :)

ದೇವಪ್ಪ 
  ಸ್ನಾನ ಮಾಡಿ ಅಲ್ಲೇ ಕೈರಳೀ ಹೋಟೆಲ್ನಲ್ಲಿ ತಿಂಡಿ ತಿಂದು, ಮದ್ಯಾಹ್ನಕ್ಕೊಂದಿಷ್ಟು ಕಟ್ಟಿಸ್ಕೊಂಡು ನಮ್ ಟ್ರೆಕ್ ಶುರು ಮಾಡಿದ್ವಿ.
ದೇವಪ್ಪನವರ ಮುಂದಾಳತ್ವದಲ್ಲಿ ಹೊರಟೆವು. ಮೊದಲಿಗೆ ಅರೆಬೆಟ್ಟ ಅಂತ ನಿರ್ಧಾರ ಮಾಡಿದ್ವಿ. ಈ ಬೆಟ್ಟಕ್ಕೆ ಹೋಗುವಾಗ ಮೊದಲಿಗೆ ಸಿಗೋದು ಐಜಿಬೆನ್ದು ಅಂತಲೋ ಏನೋ ಒಂದು ಪಕ್ಕಾ ತುಳುವ ಶೈಲಿಯ ಹಳ್ಳಿ. ದಟ್ಟ ಕಾಡಿನ ಮಧ್ಯ, ಮೂರು ನಾಲ್ಕು ಮನೆಗಳು, ಎರಡು ಗುಡಿಗಳು...ಸುಮಾರು ಎಕರೆ ಅಡಿಕೆ ತೋಟ!ಇಷ್ಟೇ ಆ ಹಳ್ಳಿ, ಭೌಗೋಳಿಕವಾಗಿ ಮಾತ್ರ! ಮಾನಸಿಕವಾಗಿ ಅದು ನಮ್ಮಂಥವರಿಗೆ ಶಾಂತಿಯನ್ನೀವ ಸುರಧಾಮವೇ ಸೈ. ಹಳ್ಳಿಯನ್ನು ದಾಟಿ ಕಾಡಿನ ಮಧ್ಯದಲ್ಲಿ ಪಯಣ.

 ಕಾಡು ದಾರಿ
ಅಸರೆಗೆಂದು ದೇವಪ್ಪ ಎಲ್ಲರಿಗೂ ಒಂದೊಂದು ಕೋಲು ಕೊಟ್ಟರು. ಹೇಳ್ತೇನೆ ಕೇಳಿ, ಖಂಡಿತವಾಗಿಯೂ ನಮ್ಮ ತಲೆಮಾರಿಗಿಂತ ದೇವಪ್ಪನಂಥವರು ಸಾವಿರ ಪಾಲು ಮೇಲು. ನಾವು ಸಾವಿರಾರು ರೂಗಳ ಬ್ರಾಂಡೆಡ್ ಶೂ ಹಾಕಿಯೂ ಲೆಕ್ಕವಿಲ್ಲದಷ್ಟು ಬಾರಿ ಮಣ್ಣು ಮೂಸಿದೆವು! ಆದ್ರೆ ದೇವಪ್ಪ, ಸಾಧಾರಣ ಹವಾಯ್ ಚಪ್ಪಲಿ ಹಾಕಿದ್ರೂ ಒಂದು ಕಡೆ ಕೂಡ ಜಾರಲೂ ಇಲ್ಲ! ಹ್ಹ..ಬಿಡಿ ಆ ವಿಷಯ ಈಗ. ಕಾಡು ಸುಮಾರು ೭೦ ಡಿಗ್ರೀ ಓರೆಯಾಗಿತ್ತು. ಕಂಡು ಕೇಳರಿಯದ ಸಸ್ಯ ಜಾತಿ, ಪಕ್ಷಿಗಳ ಕೂಗು, ಮಧ್ಯೆ ಮಧ್ಯೆ ಬೆಂಗಳೂರು-ಮಂಗಳೂರು ರೈಲಿನ ಕೂಗು, ಇವೆಲ್ಲವೂ ನಮ್ಮನ್ನ ಬೇರೆಯದೇ ಒಂದು ಪ್ರಪಂಚಕ್ಕೆ ಕರೆದೊಯ್ದವು. ಕಾಡು ಹತ್ತುತ್ತಲೇ ಸುಮಾರು ೩ ಕಿ.ಮೀ. ನಂತರ ರೈಲು ಹಳಿ ಸಿಗುತ್ತದೆ. ಅಲ್ಲಿಂದ ೩ ಕಿ.ಮೀ. ರೈಲು ಹಳಿಯ ಮೇಲೆ ನಡೆದರೆ ಅರೆಬೆಟ್ಟ ರೈಲ್ವೆ ಸ್ಟೇಷನ್ ಸಿಗುತ್ತೆ. ಇನ್ನೊಂದು ಹೇಳಲೇಬೇಕಾದ ಅಂಶವೆಂದರೆ, ಸಕಲೇಶಪುರದಿಂದ ಸುಬ್ರಹ್ಮಣ್ಯ ಕೇವಲ ೪೫ ಕಿ.ಮೀ ದೂರ ಅಷ್ಟೇ. ಈ ದೂರದಲ್ಲಿ ೫೬ ಸುರಂಗಗಳು, ೩೩೦ ಸೇತುವೆಗಳು ಇವೆ ಎಂದರೆ ನೀವು ನಂಬಲೇಬೇಕು!

 ಸುರಂಗದೊಳಗೆ..

ಅರೆಬೆಟ್ಟ 
  ಅರೆಬೆಟ್ಟ ಸ್ಟೇಷನ್ ನಿಂದ ಆಚೆ ಬದಿಯಲ್ಲಿ ಮುಗಿಲಗಿರಿ, ಗಡಿ ಗುಡ್ಡ ಮತ್ತು ಅರಮನೆ ಗದ್ದೆ ದಾರಿಗಳು ಬಹಳ ರಮಣೀಯವಾಗಿ ಕಾಣುತ್ತವೆ. ಈಚೆ ಬದಿ ಋಷ್ಯಮೂಕ ಪರ್ವತ, ಮೇತಿಕಲ್ಲು ಗುಡ್ಡ ಮತ್ತು ವೆಂಕಟಗಿರಿ ಪರ್ವತಗಳು ಇವೆ. ಅಲ್ಲೇ ಕುಳಿತು ಮದ್ಯಾಹ್ನದ ಹೊಟ್ಟೆ ಪಾಡು ಮುಗಿಸಿ ಕೊಂಚ ಹೊತ್ತು ಸುಧಾರಿಸಿ ಮತ್ತೆ ವಾಪಾಸ್ ಹೊರಟೆವು. ಈಗ ಹೊರಟದ್ದು ರೈಲ್ವೇಯವರು ಕಾಡು ಕಡಿದು ಮಾಡಿರುವ ಮಣ್ಣು ರಸ್ತೆಯಲ್ಲಿ. ಸುಮಾರು ೯ ಕಿ.ಮೀ. ದೂರದ ನಡಿಗೆ! ದೃಶ್ಯಗಳು ಕಣ್ಣಿಗೆ ಹಿತವೆನಿಸಿದರೂ ಕಾಲುಗಳು ಅಳುತ್ತಿದ್ದವು ಅದಾಗಲೇ!

 ಲತೆ!
  ಹೆಂಗೋ ಕಷ್ಟ ಪಟ್ಟು ಐ.ಬಿ. ತಲುಪಿದೆವು. ಸ್ನಾನ ಮುಗಿಸಿ ಮಡಿ ಬಟ್ಟೆ ತೊಟ್ಟು ಸುಬ್ರಹ್ಮಣ್ಯಕ್ಕೆ ಹೋಗಿ ದರ್ಶನ ಮುಗಿಸಿ ಬಂದು ಮಲಗಿದೆವು. ಹಾಯ್ ಎನಿಸುವಷ್ಟು ಆರಾಮ. infact ನಾವು ಸುಬ್ರಹ್ಮಣ್ಯಕ್ಕೆ ಹೋಗ್ಬೇಕು ಅಂತಲೇ ಇದ್ದದ್ದು ಮೊದ್ಲು. ಆಮೇಲೆ ಅದು ಅರೆಬೆಟ್ಟ ಅಂತ ಹೆಸರು ಪಡೀತು..
  ಒಳ್ಳೇ ನಿದ್ದೆ ಆಯ್ತು. ಬೆಳಿಗ್ಗೆ ಮುಗಿಲಗಿರಿಗೆ ಹೋಗೋದು ಅಂತ ಅರೆಬೆಟ್ಟದಿಂದ ಬರುವಾಗಲೇ ಡಿಸೈಡ್ ಮಾಡಿದ್ವಿ. ಹಂಗಾಗಿ ದೇವಪ್ಪ ಬೇಗ ಹೊರಡಬೇಕು, ಸಂಜೆ ಆದರೆ ಪ್ರಾಣಿಗಳು ಓಡಾಡಕ್ಕೆ ಶುರು ಮಾಡುತ್ವೆ ಅಂತ ಮುನ್ನೆಚ್ಚರಿಕೆ ಬೇರೆ ಕೊಟ್ರು. ಸರಿ ಬೇಗ ಬೇಗ ತಯಾರಾದೆವು. ಅರೆಬೆಟ್ಟಕ್ಕಿಂತ  ಮುಗಿಲಗಿರಿ ಒಂಥರಾ ಹುಚ್ಚೆಬ್ಬಿಸಿತ್ತು ನಮ್ಮನ್ನ. ಎತ್ತರವಾಗಿ ಬಹಳ ದೂರದಿಂದ ಕಾಣುವ ಅಚಲವೇ ಮುಗಿಲಗಿರಿ. ಆಹ್..ನೆನೆಸಿಕೊಂಡರೆ ಈಗ್ಲೂ ರೋಮಾಂಚನ ಆಗುತ್ತೆ. ತಿಂಡಿ ತಿಂದು ಮದ್ಯಾಹ್ನಕ್ಕೂ ತಗೊಂಡು ಒಂದಷ್ಟು ಪಾಪಿನ್ಸ್ ತಗಂಡು ಹೊರಟ್ವಿ. NH48 ದಾಟಿ ಕಾಡಿನೊಳಕ್ಕೆ ನುಗ್ಗಿದೆವು. ಅದೆಷ್ಟು ದೂರ ಕಾಡಿನಲ್ಲೇ ನಡೆದೆವೋ ಗೊತ್ತಿಲ್ಲ. ಆದ್ರೆ ಸುಸ್ತಂತೂ ತುಂಬಾ ಆಗ್ತಿತ್ತು. ಅರೆಬೆಟ್ಟಕ್ಕಿಂತ  ತೀರ ಕಷ್ಟಕರವಾಗಿತ್ತು. ಜಾರುವ ಮಣ್ಣು, ಮುಳ್ಳುಗಳು, ಕಾಲಿಗೆ ಸಿಗುವ ಬಳ್ಳಿಗಳು!

!!

 
 
 ಅಲ್ಲಲ್ಲಿ ಹಿಡಿದದ್ದು..
  ಬಹಳ ಕಷ್ಟದಿಂದ ಅಂದಾಜು ಒಂದು ೪ ಕಿ.ಮೀ ಬೆಟ್ಟ ಹತ್ತಿರಬಹುದು ನಾವು. ಆಮೇಲೆ ಹುಲ್ಲುಗಾವಲು ಸಿಕ್ಕಿತು. ನಮಗಿಂತ ಎತ್ತರಕ್ಕೆ ಬೆಳೆದು ನಿಂತ, ಗಾಳಿಗೆ ನಮಸ್ಕರಿಸುವ, ಚರ್ಮ ಸೀಳುವ ಹುಲ್ಲು! ಇದು ಇನ್ನೂ ಕಷ್ಟವೆನ್ದೆನಿಸಿತು, ಯಾಕಂದ್ರೆ ಹೆಜ್ಜೆ ಇಟ್ಟರೆ ಹುಲ್ಲು ಜಾರ್ತಿತ್ತು. ಹುಲ್ಲುಗಾವಲಿನಲ್ಲಿ ಸುಮಾರು ೧ ರಿಂದ ೨ ಕಿ.ಮೀ ನಡೆದೆವೇನೋ.. ಒಂದು ದೊಡ್ಡ ಬಂಡೆ ಸಿಕ್ಕಿತು. ಅಲ್ಲಿ ಸ್ವಲ್ಪ ವಿಶ್ರಮಿಸಿ ಮುಂದೆ ಹೊರಟೆವು.

 ಸೇತುವೆ ಬಳಿಯಿಂದ ಕಾಣುವ ಮುಗಿಲಗಿರಿಯ ಮನೋಹರ ದೃಶ್ಯ.
  ತುದಿಯನ್ನು ಮುಟ್ಟುವ ತವಕದಲ್ಲಿ ನಾವಿದ್ದೆವು. ಆದರೆ ದೇವಪ್ಪ ಅಲ್ಲಿಗೆ ಹೋಗೋದು ಬೇಡ ಮತ್ತು ತನಗೆ ಕಾಲು ನೋವೆಂದು ಹೇಳಿದ್ರು. ಹಂಗಾಗಿ ನಾವೂ ಸುಮ್ನಾದ್ವು. ಆ ಬಂಡೆ ಮೇಲೆ ಕೂತಿದ್ದಾಗ, ಸುಮಾರು ದೂರದಲ್ಲಿ ಒಂದು ಕಡವೆ ಕಾಣಿಸಿತು. ಅದಲ್ಲದೆ ಆನೆಯ ಲದ್ದಿ ಹೆಜ್ಜೆ ಹೆಜ್ಜೆಗೂ ಸಿಗುತ್ತಿತ್ತು. ಪುಣ್ಯಕ್ಕೆ ಯಾವುದೂ ಎದುರಾಗಲಿಲ್ಲ! ಈ ಮುಗಿಲಗಿರಿಯಿಂದ ಅರೆಬೆಟ್ಟ, ಋಷ್ಯಮೂಕ ಪರ್ವತ, ಮೇತಿಕಲ್ಲು ಗುಡ್ಡ ಮತ್ತು ವೆಂಕಟಗಿರಿಗಳು ಭವ್ಯವಾಗಿ ಕಾಣುತ್ತವೆ. ಅವಲ್ಲದೆ, ಚಾರ್ಮಾಡಿ ಘಾಟಿಯ ಕಡೆಗೆ, ಶಿಶಿಲ ಪರ್ವತ, ಒಂಬತ್ತು ಗುಡ್ಡ, ಅರಮನೆ ಗದ್ದೆ, ಅಮೇದಿಕಲ್ಲು, ಎತ್ತಿನ ಭುಜ ಪರ್ವತ ಮತ್ತು ಕೊಂಚ ಕುದುರೆಮುಖದ ದರ್ಶನವಾಯಿತು.ದೇವರ ದಯೆಯಿಂದ ಆಕಾಶ ಶುಭ್ರವಾಗಿತ್ತು.

 
 
ಮುಗಿಲಗಿರಿ 
  ಐಡಿಯ ನೆಟ್ವರ್ಕ್ ಚೆನ್ನಾಗಿ ಸಿಗುತ್ತಿತ್ತು. ಆದ್ರಿಂದ, ಯಾರೂ ಐಡಿಯ ನೆಟ್ವರ್ಕ್ ನ ದೂಷಿಸಬೇಡಿ ಅಂತ ವಿನಮ್ರನಾಗಿ ಕೇಳಿಕೊಳ್ಳುತ್ತೇನೆ! ಆಗ ನಾವು ಸಮುದ್ರ ಮಟ್ಟದಿಂದ ಸುಮಾರು  ೧೫೦೦ ಮೀಟರ್ಗಳಿಗಿಂತಲೂ ಎತ್ತರದಲ್ಲಿದ್ವಿ. ಆಗ ಸ್ವರ್ಗಕ್ಕೆ ಮೂರು ಗೇಣು, ಈಗ ಸ್ವರ್ಗದಲ್ಲಿ ನಾವು! ಆ ಅನುಭವವನ್ನು ಪದಗಳಲ್ಲಿ ಹೇಳೋಕೆ ಆಗ್ತಿಲ್ಲ. ಏನೇ ಆದರೂ ಅನುಭವ ಅನುಭವಿಸಿದವರಿಗೆ ಮಾತ್ರ ಗೊತ್ತು. ಸ್ವಲ್ಪ ಹೊತ್ತು ಅಲ್ಲಿ ಕೂತು, ಪುನಃ ಕೆಳಗೆ ಇಳಿಯೋಕೆ ಶುರು ಮಾಡಿದ್ವಿ. ನೆರಳು ಸಿಕ್ಕಾಗ ಊಟ ಮಾಡಿದ್ವಿ. ದೇವಪ್ಪ ನೆಲ್ಲಿಕಾಯಿ ಕೀಳೋಕ್ಕೆ ಮರ ಹುಡುಕಿದರೂ ಒಂದರಲ್ಲೂ ಕಾಯಿಗಳು ಇರಲಿಲ್ಲ. ಸರಿ ಅಂತ ಇಳಿಯೋಕೆ ಆರಂಭಿಸಿದೆವು. ಆಶ್ಚರ್ಯ ಅಂದ್ರೆ, ದಾರಿಯೇ ಇಲ್ಲದ ಆ ಕಾಡಿನೊಳಗೆ ನಾವು ಯಾವ ದಾರಿಯಲ್ಲಿ ಹೋಗಿದ್ವೋ, ಅದೇ ದಾರಿಯಲ್ಲಿ ವಾಪಾಸ್ ಕರ್ಕೊಂಡು ಬಂದ್ರು ದೇವಪ್ಪ! ಅವರಿಗೊಂದು ಅಷ್ಟಾಂಗ ನಮಸ್ಕಾರ. ಮತ್ತೆ ಐ.ಬಿ. ತಲುಪಿ ಸ್ನಾನ ಮಾಡಿ  ಧರ್ಮಸ್ಥಳಕ್ಕೆ ಹೋದ್ವಿ. ದರ್ಶನ ಮಾಡಿ  ಕಾರ್ ಸಂಗ್ರಹಾಲಯ ನೋಡಿ "MY"ಸೂರಿಗೆ ಬಸ್ ಹತ್ತಿದ್ವಿ..

Monday, January 4, 2010

ನನ್ನ ಧರ್ಮ

  "ನಮ್ಮ ಸಂಕುಚಿತ ಮನಸ್ಸುಗಳಿಗೆ ನಿಲುಕದ, ಅಪರಿಮಿತ ಶಕ್ತಿಯುಳ್ಳ ಅಮಿತನಾದ ಅಕ್ಷರನಾದ ಪರಮಾತ್ಮನಲ್ಲಿ ನಂಬಿಕೆಯಿಡುವುದೇ ನನ್ನ ಧರ್ಮ. ಆ ಅಂತರ್ಮುಖಿಯಾದ ನಂಬಿಕೆ ಯಾವ ನಿರ್ವಿಕಾರ ಶಕ್ತಿಯ ಮೇಲಿದೆಯೋ, ಯಾವುದು ಈ ಜಗತ್ತಿನ ಅಣು ಕಣಗಳಲ್ಲಿ ಅಡಕವಾಗಿದೆಯೋ, ಅದೇ ನನ್ನ ಪ್ರಕಾರ ದೇವರು." ಈ ಸಾಲುಗಳಲ್ಲಿ ವಿಶ್ಲೇಷಿಸಲ್ಪಟ್ಟಿರುವುದು ವಿಜ್ಞಾನಕ್ಕೂ ಅಧ್ಯಾತ್ಮಕ್ಕೂ ಕೊಂಡಿ ಹಾಕುವ ಹಾಗೂ ಪೂಜ್ಯ ಭಾವನೆ ಹುಟ್ಟಿಸುವ 'ಧರ್ಮ'ವನ್ನು. ಜಾತಿ ಮತ ಲಿಂಗ ಭೇದಗಳಿಲ್ಲದೆ ಹೃದಯಕ್ಕೆ ಹೃದಯವನ್ನು ಬೆಸೆಯುವುದೇ ನನ್ನಧರ್ಮ.
  ಸಾಂಪ್ರದಾಯಿಕ ಹಿಂದೂ ಕುಟುಂಬದಲ್ಲಿ ಹುಟ್ಟಿದ್ದರಿಂದ, ನನಗೆ ಚಿಕ್ಕಂದಿನಿಂದಲೂ 'ಧರ್ಮ'- ಈ ಪದದ ಅರಿವಿತ್ತು. ಬಾಲ್ಯದಲ್ಲಿ ಮೋಜಿಗಾಗಿ ಕೇಳುತ್ತಿದ್ದ ರಾಮ, ಕೃಷ್ಣರ ಕಥೆಗಳು ಹೇಗೋ ಒಂದು ರೀತಿಯಲ್ಲಾದರೂ ಮಾದರಿಯಾದವು. ಆದರೆ ಎಲ್ಲರೂ ಹೇಳುವ ಶ್ರೀ ವಿಷ್ಣುವಿನ ಅವತಾರ ರೂಪಗಳೇ ರಾಮ ಕೃಷ್ಣರು ಎನ್ನುವುದನ್ನು ಮಾತ್ರ ನಂಬಲು ಸಿದ್ಧನಿರಲಿಲ್ಲ. ಅದರೂ ಅವರ ಮೇಲೆ ಪೂಜ್ಯ ಭಾವನೆ ಇದ್ದೆ ಇತ್ತು; ಏಕೆಂದರೆ ಅವರು ಈ ಜಗತ್ತಿನಲ್ಲಿದ್ದ ಸಟೆಗಳ  ಎದುರು, ಅನ್ಯಾಯದೆದುರು ಸೆಟೆದು ನಿಂತು ನ್ಯಾಯಮಾರ್ಗ ತುಳಿದವರು.  ಅಲ್ಪರಾದ ಮಾನವರಂತೆ ಬದುಕಿದವರು. ನಾವಿಂದು ಹೆಜ್ಜೆಹೆಜ್ಜೆಗೂ ಕಾಣುತ್ತಿರುವ - ಅನುಭವಿಸುತ್ತಿರುವ ಸಾಮಾಜಿಕ ತೊಂದರೆಗಳಿಗೆ ಅವರೂ ಒಂದಿಲ್ಲೊಂದು ರೀತಿಯಲ್ಲಿ ಒಳಗಾದವರು. ಆದರೆ ಅವುಗಳನ್ನು ಹೇಗೆ ಮೆಟ್ಟಿ ನಿಲ್ಲಬೇಕೆಮ್ಬುದನ್ನು ತೋರಿಸಿಕೊಟ್ಟವರೂ  ಅವರೇ. ನನ್ನ ದೃಷ್ಟಿಯಲ್ಲಿ ಅವರ ಈ ಗುಣಗಳೇ ಅವರನ್ನು ಪೂಜ್ಯರನ್ನಗಿ ಮಾಡಿವೆ, ಅವರ ಮಾಯಾ ಶಕ್ತಿಗಳಲ್ಲ.


  ನಮ್ಮ ಭಾರತಕ್ಕೆ ಅತ್ಯಪೂರ್ವ ಸ್ವಾರಸ್ಯಕರ ಇತಿಹಾಸ ಮತ್ತು ವೇದಗಳ ಸಮರ್ಥ ಮಾರ್ಗದರ್ಶನವಿದೆ. ಹೀಗಿದ್ದರೂ ಇಲ್ಲಿ ಜಾತೀಯತೆ ಹೇಗೆ ಬೆಳೆಯಿತು ಎಂಬುದೇ ಸೋಜಿಗದ ಸಂಗತಿ!
  ಉಪನಿಷತ್ತಿನ ಶ್ಲೋಕಗಳೇ ಆಗಲಿ, ಕುರಾನಿನ ಕುಲಾಂಗಳೇ  ಆಗಲಿ, ಬೈಬಲ್ ನ ಕಮೆಂಡ್ಮೆಂಟ್ ಗಳೇ ಆಗಲಿ, ಗ್ರಂಥ ಸಾಹಿಬ್ ನ ಗುರ್ಬೇಯ್ನ್ ಗಳೇ ಆಗಲಿ.,ಎಲ್ಲದರಲ್ಲಿ ಹೇಳಲ್ಪಡುವ ಅಂಶವೆಂದರೆ 'ಒಬ್ಬನು ಒಳ್ಳೆಯವನಗಿದ್ದು, ಒಳ್ಳೆಯದನ್ನು ಮಾಡಿದರೆ ದೇವರಿಗೆ ಪ್ರಿಯನಾಗುತ್ತಾನೆ ' ಎಂದು. ಒಟ್ಟಾರೆ ಎಲ್ಲ ಧರ್ಮಗಳ ಸಮ್ಮಿಲನವು ಮಾನವೀಯತೆಯನ್ನು ಎತ್ತಿ ಹಿಡಿಯಬೇಕು ಎಂಬುದೇ ನನ್ನ ಆಸೆ.
  ನನ್ನ ಧರ್ಮವು 'ರಾಮ-ಕೃಷ್ಣ'ರದ್ದಲ್ಲ. ಅವರ ಬದುಕಿನ ರೀತಿಯದ್ದು. ನನ್ನ ಧರ್ಮ 'ಅಲ್ಲಾ', 'ಬುದ್ಧ' ಅಥವಾ 'ಕ್ರಿಸ್ತನ'ದ್ದಲ್ಲ; ಶಾಂತಿ ಸಹನೆಗಳದ್ದು.
  ನನ್ನ ನಿಜ ಧರ್ಮ 'ಮಂತ್ರ'ಗಳದ್ದಲ್ಲ; ಅವುಗಳ ಹಿಂದೆ ಅಡಕವಾಗಿರುವ "ಅರ್ಥ"ಗಳದ್ದು. ಎಲ್ಲರೂ ಹೀಗೆ ಯೋಚಿಸಿದರೆ ಭೂಮಿ ಸ್ವರ್ಗವಾಗುತ್ತದೆ. ಈ ಯೋಚನೆ ನನ್ನಲ್ಲಿ ಚಿರಸ್ಥಾಯಿಯಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ!
ಮತ್ತೆ ಬರುವೆ.