ಹ್ಹ..ಎಲ್ಲರ ಜೀವನದಲ್ಲೂ ಎಂತೆಂಥವೋ ಪ್ರಸಂಗಗಳು ಬಂದು ಹೋಗುತ್ತಿರುತ್ತವೆ. ಅವುಗಳಲ್ಲಿ ಮಧುರವಾದದ್ದೆಂದರೆ "ಪ್ರಣಯ" ಪ್ರಸಂಗ. ಎರಡು ಜೀವಗಳು ಒಂದಾದಾಗ, ಎರಡು ಮನಸ್ಸುಗಳು ಕಲೆತಾಗ ಮೂಡುವ ಭಾವನೆ ವರ್ಣಿಸಲಸದಳ. ನನಗೂ ಒಬ್ಬಾಕೆ ಪ್ರಿಯ ಸಖಿಯಿದ್ದಾಳೆ. ಅವಳ ಹೆಸರು, ನಾ ಇಟ್ಟ ಹಾಗೆ - "ಸೀತಾ"ಕುಮಾರಿ ಅಂತ. ( ಈ ಕ್ಷಣಕ್ಕೆ ನನ್ನನ್ನು ಒಬ್ಬ ತಮಿಳನೋ ಅಥವಾ ತೆಲುಗನೋ ಎಂದು ಭಾವಿಸಿ. ಏಕೆಂದರೆ ಆ ಜನಗಳು ಮಾತ್ರವೇ 'ಶಾರದ' ಅನ್ನೋಕೆ 'ಸಾರದಾ' ಅಂತಲೂ, 'ಶ್ರೀನಿವಾಸ' ಅನ್ನೋಕೆ ' ಸ್ರೀನಿವಾಸ' ಅಂತಲೂ ಅವರ ಪ್ರಕಾರ ಸರಿಯಾಗಿ ಉಚ್ಛಾರ ಮಾಡೋದು. :P ಕನ್ನಡವೇ ಚೆಂದ ಅನ್ನಿಸುತ್ತೆ ನಿಜವಾಗಿಯೂ.) ಈಗ ಅರ್ಥವಾಗಿರಬಹುದಲ್ಲವೇ ನನ್ನ ನಲ್ಲೆಯ ಹೆಸರು "ಶೀತಕುಮಾರಿ" ಅಂತ?ಏನಪ್ಪಾ ಇವನು, ಶೀತ ಅಂತಾನೆ, ಪ್ರೇಯಸಿ ಅಂತಾನೆ., ಮರ್ಲು ಹತ್ತಿತ್ತಾ ಇವನಿಗೆ ಅಂತ ಯೋಚಿಸ್ತಿದೀರಾ?
ನಂಗೆ ವರ್ಷಕ್ಕೆ ಎರಡು ಬಾರಿ ಮಾತ್ರ ಶೀತ ಆಗೋದು. ಪ್ರಣಯಕ್ಕೆ ಪ್ರೇಯಸಿ ಯಾವಾಗಲೂ ಜೊತೆಗೆ ಇರ್ಬೇಕು ಅಂತ ತಾನೇ ನಿಮ್ಮ ಪ್ರಶ್ನೆ? ನನ್ನ ಉತ್ತರ - ನನ್ನ ಶೀತಕುಮಾರಿ ಸದಾ ನನ್ನ ಬಳಿಯೇ ಇರ್ತಾಳೆ. ಹೇಗಂದ್ರೆ, ಪ್ರತೀ ಸಾರಿ ಶೀತ ನನ್ನನ್ನ ಅಪ್ಕೊಂಡಾಗ್ಲೂ ದೀರ್ಘವಾಗಿ ೬ ತಿಂಗಳು ಅಪ್ಪಿಕೊಂಡೆ ಇರ್ತಾಳೆ. ಆಯ್ತಲ್ಲ, ೨ ಸಾರಿ ಅಂದ್ರೆ ೧ ವರ್ಷ! ಹೆಂಗೆ ನಮ್ ಜೋಡಿ? ಒಮ್ಮೊಮ್ಮೆ, ನಮ್ಮ ಪ್ರಣಯ ಚೇಷ್ಟೆ ಎಷ್ಟು ಅತಿರೇಕಕ್ಕೆ ಹೋಗುತ್ತೆ ಅಂದ್ರೆ, ಅಕ್ಕಪಕ್ಕ ಮಲ್ಗಿದ್ದವ್ರಿಗೂ ನಿದ್ದೆಯೇ ಇರೋಲ್ಲ. ( ದಯವಿಟ್ಟು ತಪ್ಪಾಗಿ ಅರ್ಥೈಸಬೇಡಿ! ಕೊಳಕು ಮಂಡೆಗಳಿದ್ರೆ ನನ್ನ ತಪ್ಪಲ್ಲ, ಹೆ ಹೆ!! ) ಹೀಗೆ ತರಗತಿಯಲ್ಲಿ ಪಾಠ ಕೇಳುತ್ತಿರುವಾಗ, ಚಿತ್ರಮಂದಿರದಲ್ಲಿ ಕೂತಿದ್ದಾಗ, ಸಭೆ ಸಮಾರಂಭಗಳಲ್ಲಿ ಕೂತಿದ್ದಾಗ, ರಸ್ತೆಯಲ್ಲಿ ಧೂಳೇಳಿಸುವ ವಾಹನಗಳ ಮಧ್ಯೆ ಓಡಾಡುತ್ತಿರುವಾಗ, ಧೂಳೇಳಿಸುವ ಮನುಷ್ಯರು ಪಕ್ಕದಲ್ಲಿ ಹಾದು ಹೋದಾಗ(!!) ಇದ್ದಕ್ಕಿದ್ದಂತೆ, ಪ್ರತ್ಯಕ್ಷಳಾಗಿ ನನ್ನೊಳಗೆ ಆವಿರ್ಭವಿಸಿಬಿಡುತ್ತಾಳೆ ಒಮ್ಮೆಲೇ! ಪ್ರಳಯದ ಮುಂಚೆ ಬಡಿಯುವ ಸಿಡಿಲುಗಳ ಸದ್ದೇ ನಾಚುವಂತೆ ಮಾಡುವ ಸೀನುಗಳು, ಫೆರಾರಿ ಕಾರ್ ಕೂಡ ನಾಚಿ ನಿಂತು ಬಿಡುವಂಥ ಉಬ್ಬಸದ ಸದ್ದುಗಳು! ಆಹಾ, ನಿಮಗೆ ಸಿಕ್ತಾಳೆಯೇ ಇಂಥ ಪ್ರೇಯಸಿ?
ನನ್ನ ಮತ್ತು ಶೀತಳ ಜೋಡಿ ಕಂಡು ಕರುಬುವ ಮಂದಿ ಲೆಕ್ಕಕ್ಕಿಲ್ಲದಿರುವಷ್ಟು ಜನ ಇದ್ದಾರೆ! ಅದರಲ್ಲಿ ನನ್ನ ಅಮ್ಮ ಮೊದಲನೆಯಾಕೆ. ನನ್ನ ಈ "ಅನೈತಿಕ" ಸಂಬಂಧವನ್ನು ಕಡಿದು ಹಾಕಲು ಆಕೆ ಪಟ್ಟ ಪಾಡುಗಳು ಹೇಳತೀರವು. ಬಿಸಿನೀರು ಕುಡಿದರೆ ಸ್ಥಿಮಿತಕ್ಕೆ ಬರಬಹುದೆಂಬ ಆಸೆಯಿಂದ ಹೊತ್ತಲ್ಲದ ಹೊತ್ತುಗಳಲ್ಲಿ ಕೂಡ ಒಲೆ ಹಚ್ಚಿ ನೀರು ಕಾಯಿಸಿಕೊಟ್ಟಿದ್ದಾರೆ. ಆಯುರ್ವೇದ ಪಂಡಿತರನ್ನು ಭೇಟಿ ಮಾಡಿದ್ದಾಯಿತು, ಹೋಮಿಯೋಪತಿ ಕೂಡ ಆಯ್ತು. ಆಲೋಪತಿಯಂತೂ ನಡೀತಾ ಇದೆ. ಒಮ್ಮೆ ಮೊಸರನ್ನಕ್ಕೆ ಕಡಿವಾಣವಾದರೆ, ಮತ್ತೊಮ್ಮೆ ಬಜ್ಜಿ ಬೋಂಡಗಳಿಗೆ. ಒಂದು ಜೋಡಿಯನ್ನು ಬೇರ್ಪಡಿಸಲು ಎಂತೆಂಥ ವಿಧಾನಗಳು ನೋಡಿ!
ಹೀಗೆಲ್ಲ ನಡೆಯುತ್ತಿದ್ದರೂ, ನಾನು ಅಸಹಾಯಕನಾಗಿದ್ದೇನೆ. ಶೀತಳ ಮೋಹದಲ್ಲಿ ಸಿಕ್ಕು ಒದ್ದಾಡುತ್ತಿದ್ದೇನೆ. ಏನೇ ಇರಲಿ, ನಾನು ಅವಳು ಒಟ್ಟಿಗೆ ಇದ್ದಾಗ ಚಿಮ್ಮುವ ಪ್ರೀತಿಯ ಧಾರೆಗೆ ತಡೆ ಉಂಟೆ? ಹತ್ತು ಇಪ್ಪತ್ತು ಕರವಸ್ತ್ರಗಳಾದರೂ ಸಾಲವು. ಅಷ್ಟು ಅಗಾಧ ನನ್ನ ಅವಳ ಬಂಧ. ಇಂಥ ಬಂಧವನ್ನು ನಾಶ ಮಾಡಿದರೆ ಅವಳು ಎಷ್ಟು ಕೊರಗಿ ಸೊರಗಿ ಹೋಗುತ್ತಾಳೋ ಎಂಬ ಚಿಂತೆ ನನ್ನದು. ನನ್ನಂಥ ಸಹನಾಶೀಲ ಪ್ರಿಯತಮ ಅವಳಿಗೆ ಎಂದಿಗಾದರೂ ಸಿಕ್ಕಾನೆಯೇ? ಹ್ಮ್ಮ್ಮ್. ಈಗಲೂ, ಇದನ್ನು ಬರೆಯುತ್ತಿರುವಾಗಲೂ ಅವಳು ನನ್ನನ್ನು ಬಿಗಿದಪ್ಪಿ ಮುದ್ದಿಸುತ್ತಿರುವಳು. ಎಲ್ಲದಕ್ಕೂ ಒಂದು ಕೊನೆಯಿರಬೇಕು ಎಂಬುದನ್ನು ಅಟ್ಲೀಸ್ಟ್ ನಾನೇ ಅರ್ಥ ಮಾಡ್ಕೊತೀನಿ. ಬರಲೇನು?