Saturday, November 5, 2011

ಮಾರುಕಟ್ಟೆ

ಸಂತೆಯದು ಕಾಳಸಂತೆ!
ಭಾವನೆಗಳು ಬಿಕರಿಯಾಗುವ ಸಂತೆ.
ಜೀವಗಳನ್ನೇ ಬಡಿದು ಬಲೆಗೆ ಹಾಕುವವ, ಬಿಡುವನೇನು ಭಾವನೆಯ?

ಹೀನನ ಮಡದಿಯ ದೀನ ಭಾವನೆಯದು
ನಗುಮೊಗದಿಂದ, ಸ್ವತಂತ್ರ ತಾನಿನ್ನೆಂದು ಭಾವಿಸಿ ಕುಳಿತಿತ್ತು.
ತಿಳಿದಿತ್ತೇನದಕೆ ತಾ ಕುಳಿತ ಜಾಗ - ಅದು ಇನ್ನೊಬ್ಬನ ಹಸಿವ ನೀಗಿಸಲಿರುವ ತಟ್ಟೆಯೊಳಗೆಂದು?

ಸಾವಿರ ಸಾವಿರ ಕೈಗಳು - ಕಾಸು ಹಿಡಿದು ನಿಂತಿದ್ದವು
ನಿಮಿಷಗಳ ಹಾಸಿಗೆಯ ಹುಸಿ ಸೊಗವ ಕಾದು!
ಆ ನೀಚ ಕೈಗಳಿಗೆ ಭಾವನೆಗಳ ಅರಿವಿರಲಿಲ್ಲವೇ?
ಆ ಭಾವನೆಯದು, ತನ್ನ ಅಕ್ಕನದೋ ತಂಗಿಯದೋ ಹೆತ್ತಮ್ಮನದೋ ಎಂದು?

ಹಾದರಗಿತ್ತಿಯರೆಂದು ಸಾದರಪಡಿಸುವ ಈ ಸಮಾಜಕ್ಕೆ - ಅದರ ಗಂಡು ಸಂತಾನಗಳಿಗೆ
ಭಾವನೆಗಳ ಹೊಸಕಿ, ಪಡೆವ ಸುಖದಿಂದ ಪಡೆವೆ ಹೊಸದೇನೆಂಬುದನೆಂದು
ಕಾದು ಕಾದು ಸೊರಗುತಿಹ 'ಸೂಳೆ'ಯರ ಮೇಲೆ
ತೋರಬಾರದೇ ಇಷ್ಟೇ ಇಷ್ಟು ಭಾವುಕತೆ?

ಭವಿಯ ಮನಸಿಗೆ ಭಾವುಕತೆ-ಭಾವನೆಯೆಡೆಗೆ ಒಲವು ಮೂಡುವುದು ಅದೆಂದೋ?!


1 comment: