"ಮೋಟುಗೋಡೆಯಾಚೆ ಇಣುಕಿ" ಬ್ಲಾಗಿನಿಂದ ಈ ನನ್ನ ಬರಹಕ್ಕೆ ಸ್ಫೂರ್ತಿ ಪಡೆದಿದ್ದೇನೆ! :) (ಬರೆಯುವ ಧೈರ್ಯ ಮಾಡಿದ್ದೇನೆ)
** ಇದು ನಾನು ಹೈ ಸ್ಕೂಲಿನಲ್ಲಿದ್ದಾಗ ನಡೆದದ್ದು. ಆಗ ನಾನು ಇನ್ನೂ "ಪುಟ್ಟ ಹುಡ್ಗ".**
ನಾನು ಓದಿದ್ದು ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆಯಲ್ಲಿ. ಸ್ಕೂಲಲ್ಲಿ ನನ್ನ ಪ್ರಥಮ ಭಾಷೆ ಸಂಸ್ಕೃತ. ಹೊಸ ಹೊಸ ಭಾಷೆಗಳನ್ನ ಕಲಿಯೋ ಆಸೆಯಿಂದ ಸಂಸ್ಕೃತವನ್ನ ಆರಿಸಿಕೊಂಡಿದ್ದೆ. ಎಂಟು ಮತ್ತು ಒಂಬತ್ತನೆಯ ತರಗತಿಗಳು ಕಣ್ಣು ಮಿಟುಕಿಸುವುದರೊಳಗೆ ಮುಗಿದು ಹೋಗಿದ್ದವು! ಈಗ ಹತ್ತು!
ದಾರೀಲಿ ಹೋಗುವಾಗ ನಮ್ಮ ಶಾಲೆಯ ಅಂಗಿ ಕಂಡರೆ ಸಾಕು, ಜನ ನಿಲ್ಲಿಸಿ, "ಮರಿಮಲ್ಲಪ್ಪಾಸಾ?" ಅನ್ನೋರು.
ನಾವು "ಹೂ" ಅಂತಿದ್ವಿ.
ಅಷ್ಟಕ್ಕೇ ಸುಮ್ನಾಗ್ತಿರ್ಲಿಲ್ಲ. "ಯಾವ್ ಕ್ಲಾಸು?" ಅನ್ನೋರು.
"ಹತ್ತು".
"ಯಾವ್ ಸೆಕ್ಷನ್ನು?"
"ಬಿ" .
"ಓಹೋ ಸಂಸ್ಕೃತಾನಾ..ಅದೇನು ಕಡಿದು ಕಟ್ಟೆ ಹಾಕ್ತೀರೋ ಆ ಭಾಷೇಲಿ"
ಇನ್ನು ಮನೇಲಿ..ಟಿವಿ ನೋಡೋ ಹಂಗಿಲ್ಲ.. ಎಲ್ಲ ಬಂದು, ಸಂಸ್ಕೃತ ತಗೊಂಡಿದೀಯ ಕಷ್ಟ ಇರುತ್ತೆ ಓದ್ಕೋ ಹೋಗು ಅನ್ನೋರು!
ಆದ್ರೆ, ಅಸಲಿಗೆ, ಸಂಸ್ಕೃತ ನಂಗೆ ಯಾವತ್ತೂ ಕಷ್ಟ ಅನ್ನಿಸಲೇ ಇಲ್ಲ. ಆನಂದದಿಂದ ಅನುಭವಿಸಿ ಪಾಠ ಕೇಳ್ತಾ ಇದ್ದೆ ..ಹಂಗೇ ಅಷ್ಟೇ ಚೆನ್ನಾಗಿ ಪಾಠ ಮಾಡೋರು ಕೂಡ!
ಈಗ ವಿಷಯಕ್ಕೆ ಬರ್ತೀನಿ!
ಹತ್ತನೆಯ ತರಗತಿ. ಒಂದು ಮಂಗಳವಾರ. ಮದ್ಯಾಹ್ನ ಊಟದ ನಂತರ ಮೊದಲ ಕ್ಲಾಸು ಸಂಸ್ಕೃತ. ವ್ಯಾಕರಣ ಅಂತ ಮೊದಲೇ ನಿಗದಿಯಾಗಿತ್ತು. ಹಂಗಾಗಿ, ಅದಕ್ಕೆಂದೇ ಒಂದು 'ವಿದ್ಯಾ ನೋಟ್ ಬುಕ್' ಇಟ್ಟಿರ್ಬೇಕಿತ್ತು. ತಗೊಂಡ್ ಹೋಗಬೇಕಿತ್ತು. ಇಲ್ಲ ಅಂದ್ರೆ ಕ್ಲಾಸಿಂದ ಆಚೆ!
ಸರಿ, ಕ್ಲಾಸು ಶುರುವಾಯ್ತು. ಸಂಧಿಗಳ ಬಗ್ಗೆ ನಮ್ಮ ಮಿಸ್ ಶ್ರೀಮತಿ. ಜಯಶ್ರೀ (RJ) ಪಾಠ ಮಾಡಿದ್ರು. ಅದರಲ್ಲೂ ಗುಣ ಸಂಧಿ. ಗುಣಸಂಧಿಯ ಸೂತ್ರ, ನಿಯಮಗಳನ್ನೆಲ್ಲಾ ಹೇಳಿಯಾದ ಮೇಲೆ ಒಂದಷ್ಟು ಪದಗಳನ್ನ ಕರಿ ಹಲಗೆಯ ಮೇಲೆ ಬರೆದು, ಬಿಡಿಸೋದಕ್ಕೆ ಹೇಳಿ ತಾವು ಹೋಗಿ ಕುಳಿತುಬಿಟ್ಟರು. ಪದಗಳು ಹೀಗಿದ್ದವು..
ದೇವರ್ಷಿ, ಮಹರ್ಷಿ, ಲೋಕರ್ಷಿ, ಬ್ರಹ್ಮರ್ಷಿ.
ಒಟ್ಟು ನಾಲ್ಕು ಪದಗಳು.
ಇಡೀ ತರಗತಿ ತನ್ಮಯವಾಗಿ ಪದಗಳನ್ನು ಬಿಡಿಸುವಲ್ಲಿ ಮಗ್ನವಾಗಿತ್ತು.
ಇದ್ದಕ್ಕಿದ್ದಂತೆ, ಮೂರನೇ ಬೆಂಚಿನಿಂದ ಒಂದು ಧ್ವನಿ..
"ಲೋ ಮಗ.."
"ಏನೋ ನಿಂದು"
"ಗೊತ್ತಾಗ್ತಿಲ್ಲ ಕಣೋ ಹೆಂಗ್ ಬಿಡ್ಸೋದು ಅಂತ..."
"ಗುಬಾಲೆ..ಈಗಷ್ಟೇ ಹೇಳಿಕೊಟ್ರಲ್ಲೋ ಮಿಸ್ಸು..."
"ಅಂದ್ರೂ ಗೊತಗ್ತಿಲ್ಲ ಕಣೋ..."
ಈ ಎಲ್ಲ ಸಂಭಾಷಣೆ ಜೋರಾಗಿ ನಡೀತಿದೆ..ಕ್ಲಾಸಿಗಿಡೀ ಮಾತುಗಳು ಸ್ಪಷ್ಟವಾಗಿ ಕೇಳ್ತಿದ್ವು!
ಮತ್ತೆ ಮುಂದುವರೀತು...
"ಏನೋ ಗೊತ್ತಾಗ್ತಿಲ್ಲ??"
"ಬ್ರಹ್ಮರ್ಷಿ ಬಿಡ್ಸೋದು ಹೆಂಗೋ?"
"ಬ್ರಹ್ಮ + ಋಷಿ"
"ಸರಿ ಕಣೋ ಮಗ..ಥಾಂಕ್ಸ್.."
ಒಂದೆರಡು ನಿಮಿಷಗಳ ತರುವಾಯ..
"ಮಗಾ"
""ಮತ್ತೆ ಏನೋ ಗೋಳು ನಿಂದು?"
"ಬ್ರಹ್ಮರ್ಷಿ ಬಿಡ್ಸುವಾಗ, ಬ್ರಹ್ಮಂಗೆ "ಬ್ರ " ದೊಡ್ಡದೋ ಚಿಕ್ಕದೋ?"
(ಪಾಪ ಆತ, 'ಬ' ಅಕ್ಷರ ಮಹಾಪ್ರಣವೋ ಅಲ್ಪಪ್ರಾಣವೋ ಅಂತ ಕೇಳಿದ್ದು)
ಇನ್ನೇನು ಇಡೀ ತರಗತಿ ನಗೆಗಡಲಲ್ಲಿ ಮುಳುಗಬೇಕು ಅನ್ನುವಷ್ಟರಲ್ಲಿ.. ಆ ಇನ್ನೊಬ್ಬ
"ನಂಗೆ ಸೈಜ್ ಗೊತ್ತಿಲ್ಲ..ಫ್ರೀ ಸೈಜ್ ಕೊಡು" ಅಂದ..
ಸೂರು ಕಿತ್ತು ಹೋಗುವ ಹಾಗೆ ಎಲ್ಲರೂ ನಗ್ತಾ ಇದ್ವಿ.. ಹುಡುಗರೂ ಹುಡುಗೀರು ಎಲ್ಲ..
ನಮ್ಮ ಮಿಸ್ಸಿಗೆ ಏನಾಯ್ತು ಅಂತ ಗೊತ್ತೇ ಆಗ್ಲಿಲ್ಲ ಪಾಪ..
ಏನಾಯ್ತು ಅಂತ ನಿಲ್ಲಿಸಿ ಕೇಳಿದರು. ಪಾಪ ಯಾರು ತಾನೇ ಏನು ಹೇಳಕ್ಕಾಗ್ತಿತ್ತು?
ಅದರೂ ಚತುರ್ಮುಖ ಬ್ರಹ್ಮನಿಗೆ ಈ ಗತಿ ಬರಬಾರದಿತ್ತು ಅಲ್ವೇ?