Thursday, June 27, 2013

ಒಂಟಿತನದ ಜಾಡು ಹಿಡಿದು...

"ಎಲೆಗಳೆದ ಮರದಲ್ಲಿ ನೆರಳನರಸಲಿಲ್ಲ,
ಕಳೆಯರೆತ ದೀಪದಲಿ ಬೆಳಕನರಸಲಿಲ್ಲ,
ಕುರುಹಳಿದ ಮೂರ್ತಿಯಲಿ ರೂಪನರಸಲಿಲ್ಲ,
ಶಬ್ದವಡಗಿ ನಿಃಶಬ್ದನಾದ ಬಸವನಲ್ಲಿ ಶಬ್ದವರಸಲಿಲ್ಲ,
ಸಂಗಯ್ಯನಲ್ಲಿ ಕಾಯವಿಲ್ಲದ ಕರುಣಿಯಾದೆ ನಾನು!" - ಕಾಯಕಯೋಗಿ ಬಸವಣ್ಣ.

ಈ "ವಚನ" ಕಣ್ಣಿಗೆ ಕಾಣುವಷ್ಟು ತಿಳಿಯಾದುದಲ್ಲ. ಕೆದಕುತ್ತ ಹೋದರೆ ತನ್ನೊಳಗೆ ಹೊಸ ಹೊಸ ಆಯಾಮಗಳನ್ನು ಹುಟ್ಟುಹಾಕುತ್ತ ಜೊತೆಜೊತೆಗೆ ನಮ್ಮತನದ ಅರಿವಿನ ಹಣತೆಯನ್ನು ನಮ್ಮ ಮನಗಳ ಗುಡಿಗಳೊಳಗೆ ಹಚ್ಚುವಂಥ ಸಾರಭರಿತ ವಚನ.

ಹುಟ್ಟಿ ಬೆಳೆದ ಮೈಸೂರು ಒಂದು ರೀತಿ ಬಾವಿಯ ಹಾಗಿತ್ತು. ಅದೇ ನನ್ನ ಪ್ರಪಂಚ. ಅದು ಬಿಟ್ಟರೆ ಇರುವುದು ಬರೀ ಕನ್ನಂಬಾಡಿ ಕಟ್ಟೆ, ನಂಜನಗೂಡು, ಉತ್ತನಹಳ್ಳಿಗಳು ಮಾತ್ರ ಎಂದು ತಿಳಿದಿದ್ದ ಕಾಲವೊಂದಿತ್ತು ನಾನು. ಪ್ರಪಂಚದ ಬೇರೆಡೆಗಳಲ್ಲಿ ಸಿಗುವ ಸೌಭಾಗ್ಯಗಳಲ್ಲವೂ ಮೈಸೂರಲ್ಲಿ ಲಭ್ಯ, ಆದರೆ ಮೈಸೂರು ನೀಡುವ, ಮೌನವೇ ಮಾತಾಗಿದ್ದ "ಪರಿಸರ" ಮೈಸೂರೆನ್ನುವ ಮುಗುದೆ ಹೊದ್ದ ಸೀರೆಯಾಗಿತ್ತು. ಹಾಗಂತ ಜೀವರಹಿತ ಊರದು ಎಂದು ಎಣಿಸಬೇಡಿ. ಎಲ್ಲವೂ ಇತಿ-ಮಿತಿಯಲ್ಲಿ ನಡೆದುಕೊಂಡು ಬಂದ ಊರದು. ಸದ್ದುಗದ್ದಲ ಕೇಳಬೇಕೆಂದರೆ ಮನೆಯ ಮುಂದೆ ತರಕಾರಿಯವರೋ, ತೆಂಗಿನಕಾಯಿ ಕೀಳುವವರೋ ಇಲ್ಲವೇ ಪೋಲಿಯೋ ಲಸಿಕೆಗಾಗಿ ಪಾಲಿಕೆಯವರು ರಿಕ್ಷಾದಲ್ಲಿ ಕೂಗುತ್ತಾ ಹೋಗಬೇಕು. ಇಲ್ಲವೆ ತುಸು ದೂರ ನಡೆದು ನಾಲ್ಕು ರಸ್ತೆಗಳು ಸೇರುವೆಡೆಯಲ್ಲಿ ನಿಂತರೆ ಒಂದಷ್ಟು ಸದ್ದು ಕಿವಿಗೆ ಬಿದ್ದೀತು. ಇಲ್ಲವೆಂದರೆ ಬರೀ ಗಾಳಿ ಬೀಸುವ ಸದ್ದು, ಪಕ್ಷಿಗಳ ಉಲಿವು, ತೆಂಗಿನ ಗರಿ ಧೊಪ್ಪೆಂದು ಭೂಮಿಗೆ ಮುತ್ತಿಕ್ಕುವುದು, ಆಗೊಮ್ಮೆ ಈಗೊಮ್ಮೆ ರಸ್ತೆಯಲ್ಲಿ ಓಡುವ ವಾಹನದ ಠೇಂಕಾರದ ಸದ್ದು - ಇಷ್ಟೆ!

ಅಲ್ಲಿಂದ ನನ್ನ ಪಯಣ 'ಗಂಡುಬೀರಿ'ಯಂತಿರುವ ಬೆಂಗಳೂರಿಗೆ. ಮೈಸೂರೇ ಎಲ್ಲ ಎನ್ನುತ್ತಿದ್ದ ನನ್ನೊಳಗೆ, ನನಗರಿವಿಲ್ಲದಂತೆಯೇ ಮೋಡಿಯೊಂದನ್ನು ಮಾಡಿ ಬೆಂಗಳೂರಂಬ ಬೆಂಗಳೂರೇ ನನನ್ನು ಆಕರ್ಷಿಸಿತು. ಆದರೆ ಬೆಂಗಳೂರಿನಲ್ಲಿ ನೀರವತೆಯನ್ನು ಹುಡುಕುವುದು ಕಷ್ಟವೇ. ನಾಳೆಯೆಂಬುದೇ ಇಲ್ಲವೆನ್ನುವ ಹಾಗೆ ನಿತ್ರಾಣಾಗಿ ಓಡುವ ಗಾಡಿಗಳು - ಓಡಾಡುವ ಮಂದಿ! ಎಲ್ಲರಿಗೂ ಗುರಿಯೆನ್ನುವುದಿದ್ದು, ಅದು ಅವರಿಗೆ ಮನದಟ್ಟಾಗಿದ್ದು ಅದರೆಡೆಗೆ ಹೋಗಿ ಸೇರಲು ಹವಣಿಸಿ ಅಷ್ಟು ಆತುರಾತುರವಾಗಿರುತ್ತಿದ್ದರೋ ಅಥವಾ ಮುಂದೇನೆಂಬ ಪ್ರಶ್ನೆಗೆ ಉತ್ತರ ಸಿಗಲಾರದ ಹತಾಶ ಭಾವದಿಂದಾಗಿ ಮಾನಸಿಕ ಸ್ಥಿಮಿತದಿಂದ ತುಸು ದೂರ ನಡೆದು ಹಾಗೆ ದಡಬಡಿಸುತ್ತಿದ್ದರೋ? ತಿಳಿಯದು.

ಸಂಜೆಯಾಗುತ್ತಲೇ ತಯಾರಾಗಿ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ತಮ್ಮದೇ ರೀತಿಯ 'ಶಾಪಿಂಗ್' ಮಾಡಲು ಹವಣಿಸಿ ತರಾತುರಿಯಲ್ಲಿ ತಯಾರಾಗಿ ಬಿರುಬಿರನೆ ಹೆಜ್ಜೆ ಹಾಕಿದ ಹುಡುಗಿಯ ನಡಿಗೆಯಲ್ಲೂ ಅದೇ ಆತುರತೆ. ಇಟ್ಟ ಒಂದು ಹೆಜ್ಜೆಯ ಬಡಿತದಿಂದ ಚಪ್ಪಲಿ ಸಾವರಿಸಿಕೊಳ್ಳುವಷ್ಟರಲ್ಲಿ ಮತ್ತೊಂದು ಹೆಜ್ಜೆ, ಮಗದೊಂದು, ಅಂತ್ಯವೇ ಇಲ್ಲವೆನ್ನುವ ಪುಟಪುಟನೆ ಇಡುತ್ತಿರುವ ಹೆಜ್ಜೆಗಳು. ಆ ಅಂಗಡಿಯಲ್ಲಿ ಸಿಗಬಹುದು. ಅಲ್ಲಿ ನಿಲ್ಲು. ಛೆ! ಇಲ್ಲ. ಇಲ್ಲೂ ಇಲ್ಲ. ಮುಂದೆ ನಡಿ ನೋಡೋಣ ಎಂಬ ಅವಳ ಮಾತಿಗೆ ಸೊರಗುವ ಚಪ್ಪಲಿ! ಅವಳು ಮುಡಿದ ಕೆಂಡಸಂಪಿಗೆಯ ವಾಸನೆಯ ಜಾಡು ಮೂಗಿಗೆ ಬಡಿದು ಅವಳ ಮನ ಒಲ್ಲದ ನಲ್ಲ ಅವಳ ಬೆಂಬತ್ತಿದ. ಅವನಲ್ಲೂ ಅದೇ ಆತುರತೆ! ಅವಳನ್ನು ನೋಡಿ ಮಾತಾಡಬೇಕೆಂಬ ಹಂಬಲ. ಅವನ ಕೈಗಿ ಸಿಗಬಾರದೆಂಬ ಘೋರ ಹಟ ಅವಳಲ್ಲಿನ ಆತುರತೆಗೊಂದು ಇಂಬು ಕೊಟ್ಟರೆ, ಆ ಪಾದರಸದಂಥವಳನ್ನು ತನ್ನೆದೆ 'ಥರ್ಮೋಮೀಟರ್'ನ ಒಳಗೆ ಕೂಡಿ ಹಾಕಿಕೊಳ್ಳಬೇಕೆಂಬ ಹಟ ಅವನಲ್ಲಿನ ಆತುರತೆಗೆ ಕಾರಣ! ವೀಳೆಯ-ಕಡ್ಡಿಪುಡಿ ಜಗಿಯುತ್ತ, ಸೊಂಟಕ್ಕೆ ಎಲೆಚೀಲ ಸಿಕ್ಕಿಸಿಕೊಂಡ ಗೂರಲು ಹಿಡಿದ, ಬೆವೆತ ಹಣೆ - ಕೆದರಿದ ಮುಂದಲೆಯ ಇಳಿವಯಸ್ಸಿನ ಹೆಂಗುಸು, 'ತಗಳಿ ಸಾಮಿ, ಫ್ರೆಶ್ಶ್ ಮಲ್ಲಿಗೆ "ಊವಾ"' ಎಂದು ಕೂಗುತ್ತಿದ್ದ ಕೊಂಗರ ಹೆಂಗುಸು, ಬಾಯಲ್ಲಿರಬೇಕಾದ ಮೂವತ್ತೆರಡರ ಬದಲಿಗೆ ಮೂರೇ ಇದ್ದರೂ ಹತ್ತೂ ಬೆರಳುಗಳಿಗೆ ಧರಿಸಿದ್ದ ಹೊಳೆಯುವ ಉಂಗುರಗಳನ್ನೆ ಪ್ರದರ್ಶಿಸಿ ಬೀಗುತ್ತಿದ್ದ ಧೂಪ-ದೀಪ ಅಂಗಡಿಯ ತೆಲುಗು ಶೆಟ್ಟಿ - ಯಾರಲ್ಲಿಯೂ ಸಾವಧಾನರಾಗಿರಬೇಕೆಂಬ ಮನಸ್ಸಿದ್ದಂತೆ ತೋಚುವುದಿಲ್ಲ. ಚೌಕಾಸಿಯ ಭಾವ ಗಿರಾಕಿಯ ಮನದಲ್ಲಿ ಮೂಡುತ್ತಿರುವ ವಾಸನೆ ಮೂಗಿಗೆ ಬಡಿದ ಕೂಡಲೆ ಅವರುಗಳ 'ಮೂಡು'ಗಳೂ ಕೂಡ ತಡವೇ ಇಲ್ಲದೆ ಬೇರೆ ಗಿರಾಕಿಯ ಕಡೆಗೆ ವರ್ಗ. ಯಾವುದೋ ಅಂಗಡಿಯಲ್ಲಿ ಉರಿಸಿ ಬೀದಿಗೆ ಬಿಸುಟಿದ್ದ 'ಜೆಟ್ಟಪ್ಪ ಅಂಡ್ ಸನ್ಸ್' ಅಗರಬತ್ತಿಯ ಖಾಲಿ ಪ್ಯಾಕೇಟು - ತಾನು ಗಾಳಿಯೊಡನೆ ಸೆಣಸುವ ಗಾಡಿಗಳ ಗಾಲಿಗಳ ಅಡಿಯಲ್ಲಿ ಸಿಕ್ಕು ಆತುರಾತುರವಾಗಿ ರಸ್ತೆಯ ಇಕ್ಕೆಲಗಳನ್ನೂ ಮುತ್ತಿಕ್ಕುತ್ತ ದಿನಗಳೆದು ರಾತ್ರಿಯಾಗುತ್ತಲೇ ನಿರುಂಬಳಾಗಿ ನಿದ್ರಿಸಲು ತಾವೊಂದನ್ನು ಹುಡುಕುತ್ತಿತ್ತು. ಈ ಎಲ್ಲ ತೀಕ್ಷ್ಣ ಕ್ರಿಯೆಗಳಿಗೂ ಸಾಕ್ಷಿಯೆಂಬತೆ ನಿಂತವು ಎಂದೋ ನೆಟ್ಟಿದ್ದ ಕಂಬಗಳಂತೆ ನಿಂತ ಬೀದಿದೀಪದ ಕಂಬಗಳು. ಇಳಿಸಂಜೆಯಾದೊಡನೆ ಬೆಳಗಿ ಹಗಲು ಮೂಡುವವರೆಗೂ ಝಗಮಗಿಸಿ ಯಾರಿಗೂ ತಿಳಿಯದ ಹಾಗೆ ಸುಮ್ಮನಾಗಿ ಬಿಡುತ್ತಿದ್ದವು. ಅವುಗಳ ಅಸ್ತಿತ್ತ್ವ, ಆ ಓಟದ ಭರದಲ್ಲಿ ಯಾರ ಗಮನಕ್ಕೂ ಬಾರದು. ಇಂಥವುಗಳ ನಡುವೆಯೂ ಕೂಡ ಯಾರು ಬೇಕಾದರೂ ಈ ಊರಲ್ಲಿ ಒಬ್ಬಂಟಿಯ ಭಾವವನ್ನನುಭವಿಸಬಹುದು - ಆ ದೀಪದ ಕಂದಬ ಹಾಗೆ, ನಿಜದ ರೀತಿಯಲ್ಲಿ ಒಂಟಿಯಾಗದೇ ಗಿಜಿಗುಡುವವರೊಂದಿಗೆ ಸುತ್ತುವರೆದೂ ಕೂಡ.

ಆದರೆ, ಕಳೆದೊಂದು ವರ್ಷದಿಂದ ನನ್ನನ್ನು ಕಾಡುತ್ತಿರುವುದು, ಆ ನಿಜವಾದ ಒಂಟಿತನ. ಒಬ್ಬನೇ ಇರಲು ಬಯಸುವ ನನ್ನಲ್ಲಿ ಈ ಥರದ ಒಂದು ಯೋಚನೆ ಬರುತ್ತದೆಂಬ ಕಿಂಚಿತ್ ಕಲ್ಪನೆಯೂ ನನಗಿರಲಿಲ್ಲ. ಈ ಮುಂದುವರೆದ ದೇಶಗಳೆ ಹೀಗಾ ಅಂತ ಅನ್ನಿಸೋದು ಬಹಳ ಸಲೀಸಾಗಿ ಹೋಗಿದೆ. ಪ್ರಜೆಗಳ ಜೀವರಕ್ಷಣೆಯ ಹೆಸರಿನಲ್ಲಿ ಅವರ ಸ್ವಾತಂತ್ರ್ಯವನ್ನು ಮಿತಿಗೊಳಿಸುವ ಸರ್ಕಾರಗಳು ಒಂದೆಡೆಯಾದರೆ, ಮನುಜ-ಮನುಜರ ಮಧ್ಯೆ ಇರಬೇಕಾದ ಬಾಂಧವ್ಯ-ಅಂತಃಕರಣಗಳು ಕೇವಲ ಸಾಕುಪ್ರಾಣಿಗಳಿಗೆ ಸೀಮಿತವಾಗಿತ್ತೆವೆಯೇನೋ ಅನ್ನಿಸುವ ಕೈಂಕರ್ಯಗಳನ್ನು ಮಾಡುವವರು ಇನ್ನೊಂದೆಡೆ. ಈ ಅಸಮತೋಲನದ ನಡುವೆ ಇರುವುದು 'ಗಾಢ ಮೌನ'!

ಇಲ್ಲಿ ರಸ್ತೆಯಲ್ಲಿ ನಡೆದು ಹೋಗುವಾಗ ತಲೆತಿರುಗಿ ಬಿದ್ದರೆ, ಹಿಡಿದೆತ್ತಿ ಬದಿಗೆ ಸರಿಸಿ ನೀರು ಕೊಡಲು ಯಾರೂ ಇರಿವುದಿಲ್ಲ. ಯಾಕೆಂದರೆ ಕಾಲ್ನಡಿಗೆಯಲ್ಲಿ ಓಡಾಡುವವರೇ ವಿರಳ ಇಲ್ಲಿ. ಎಲ್ಲರೂ ಚಕ್ರಪಾದಿಗಳೇ! ನಿಂತು ನೋಡಿ ಮಾತನಾಡಲು ಯಾರಲ್ಲಿಯೂ ಪುರುಸೊತ್ತಿಲ್ಲ. ಮೇಲಾಗಿ ಮನಸ್ಸಿಲ್ಲ. ದಾರಿಯಲ್ಲಿ ಸಿಗುವ ಎಲ್ಲರ ಮುಖಗಳ ಮೇಲೂ ಮೂಡುವ ನಗೆ ಕ್ರಮೇಣ 'ಕೃತಕ' ಎನಿಸತೊಡಗಿತು. ಇವರನ್ನು ಕರೆದುಕೊಂಡು ಹೋಗಿ ನಮ್ಮ ಬೆಂಗಳೂರಿನ ಗಿಜಿಗುಡುವ ರಸ್ತೆಯೊಂದರಲ್ಲಿ ಬಿಟ್ಟರೆ ಸುಮ್ಮನೆ ಒಂದು ಕಡೆ ಬಿಮ್ಮಾಗಿ ನಿಂತು ಎಲ್ಲರ ಮುಖಕ್ಕೂ ರಾಚುವ ಹಾಗೆ ಬಾಯಿ ಬಿಟ್ಟು ನಗುತ್ತಿರಬೇಕಾದೀತು ಅಷ್ಟೇ! ಈ ಮಾನವ ನಿರ್ಮಿತ ರಾಷ್ಟ್ರದಲ್ಲಿ ಯಾವುದೂ ನೈಜವಾಗಿಲ್ಲ ಎನ್ನುವ ಭಾವನೆ ನನ್ನಲ್ಲಿ ತೀವ್ರವಾಗಿ ಬೇರುಬಿಟ್ಟಿದೆ. ರಸ್ತೆ ಬದಿಯ ಮರವೊಂದು ಹೀಗೇ ಬೆಳೆಯಬೇಕು, ಇಂಥದ್ದೇ ಮರ ದಾರಿಯುದ್ದ ಹಾಕಬೇಕು, ಹುಲ್ಲನ್ನು ತನಗಿಷ್ಟ ಬಂದಂತೆ ಎಲ್ಲಿಯೂ ಬೆಳೆಯ ಬಿಡಬಾರದು, 'ಮಣ್ಣು' ಎನ್ನುವುದು ಎಲ್ಲಿಯೂ ಕಾಣಕೂಡದು, ಅದು ಇದು ಹೀಗೆ ಎಲ್ಲ ಕಡೆ ನಿರ್ಬಂಧಿತ ಬೆಳವಣಿಗೆ. ಮನುಷ್ಯ ಸಾಮಾಜಿಕ ಜೀವಿ. ಹಾಗಾಗಿಯೇ ಗುಂಪಾಗಿ ಬೀಡುಬಿಟ್ಟು ನಾಗರಿಕನಾದವನು. ಈಗ ನಾಗರಿಕತೆ ಯಾವ ಮಟ್ಟ ತಲುಪಿದೆ ಎಂದರೆ, ಸೋ ಕಾಲ್ಡ್ 'ಸೋಶಿಯಲ್ ಗ್ಯಾದರಿಂಗ್'ಗಳಲ್ಲಿ ಮಾತ್ರ ಜನರು ಗುಂಪುಗೂಡುವುದು. ನಾಗರಿಕತೆ ಹೆಚ್ಚಿದಂತೆ ಸಂಸ್ಕೃತಿ ಕಡಿಮೆಯಾಗುತ್ತದೆ ಅನ್ನೋದು ಇದಕ್ಕೇನಾ? ಏನಾದರೂ ಇರಲಿ. ಈ ಮುಂದುವರಿದ ಸಮಾಜ ನನಗೆ ದಯಪಾಲಿಸಿರುವ ಈ ಒಂಟಿತನದಿಂದಾಗಿ ನಾನು ತುಸು ಹೆಚ್ಚು ನನ್ನನ್ನು ಅರ್ಥ ಮಾಡಿಕೊಳ್ಳೋದಕ್ಕೆ ಅನುವಾಗಿದೆ. ಅದಕ್ಕೆ ನಾನು ಆಭಾರಿ! - ಎಂದು ಹೇಳುತ್ತಾ ಮಾತ ನಡುವೆ ಮತ್ತೊಮ್ಮೆ ಮೌನಿಯಾಗ ಹೊರಟಿರುವೆ. ಬರುತ್ತೇನೆ!

2 comments:

  1. ನಿಮ್ಮ ಮೌನವು ತಾತ್ಪೂರ್ತಿಕವಾಗಿರಲಿ ಎಂದು ಆಶಿಸುತ್ತೇನೆ!

    ReplyDelete
  2. avalokana chennagide Karthik... Neenu padya barediddu maatra odidde... gadhya kooda tumba chennagi bariteeya :)

    Bengalooru konegu modi maaditu thane :) nenapidya naanu heLiddu :)

    Keep writing :)

    ReplyDelete